ದೆಹಲಿ ಕಂಟೋನ್ಮೆಂಟ್ ಅತ್ಯಾಚಾರ: ದಲಿತ ಬಾಲಕಿಯ ಸಾವಿಗೆ ಕಾರಣ ಏನು ಗೊತ್ತೇ ?

Update: 2021-09-17 04:54 GMT

ದೆಹಲಿ: ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಒಂಬತ್ತು ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ದೆಹಲಿ ಕಂಟೋನ್ಮೆಂಟ್ ಪ್ರದೇಶದ ಚಿತಾಗಾರವೊಂದರಲ್ಲಿ ಆಗಸ್ಟ್ ಒಂದರಂದು ದೇವಸ್ಥಾನದ ಅರ್ಚಕ ಹಾಗೂ ಆತನ ಸಹಚರರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ, ಲೈಂಗಿಕ ಕಿರುಕುಳದ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾಗಿ ದೆಹಲಿ ಪೊಲೀಸರು ಆರೋಪಿಗಳ ಹೇಳಿಕೆಯನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

"ಪ್ರಮುಖ ಆರೋಪಿ ರಾಧೇಶ್ಯಾಂ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ವೇಳೆ ಬಾಯಿಯನ್ನು ತನ್ನ ಕೈಯಿಂದ ಮುಚ್ಚಿದ್ದ. ಇದರಿಂದಾಗಿ ಬಾಲಕಿಗೆ ಉಸಿರಾಡಲು ಸಾಧ್ಯವಾಗದೇ ಉಸಿರುಗಟ್ಟಿ ಬಾಲಕಿ ಮೃತಪಟ್ಟಳು" ಎಂದು ಆರೋಪಿಯೊಬ್ಬ ನೀಡಿರುವ ಹೇಳಿಕೆಯ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಬಾಲಕಿಯ ಮೇಲೆ ರಾಧೇಶ್ಯಾಂ ಅತ್ಯಾಚಾರ ಎಸಗುವ ವೇಳೆ ಕುಲದೀಪ್ ಸಿಂಗ್ ಎಂಬಾತ ಬಾಲಕಿಯ ಕೈಗಳನ್ನು ಹಿಡಿದುಕೊಂಡಿದ್ದ ಎಂದು ಹೇಳಲಾಗಿದೆ.

ಈ ಮೂಲಕ ಬಾಲಕಿಯ ಸಾವಿಗೆ ಕಾರಣ ಏನು ಎನ್ನುವುದು ಮೊದಲ ಬಾರಿಗೆ ಬಹಿರಂಗವಾಗಿದೆ. ಇದು ಆರೋಪಿಗಳು ಈ ಮೊದಲು ನೀಡಿದ್ದ ಹೇಳಿಕೆಯ ನಿಜ ಸ್ವರೂಪವನ್ನು ಬಹಿರಂಗಪಡಿಸಿದೆ. 55 ವರ್ಷದ ರಾಧೇಶ್ಯಾಂ ಹಾಗೂ ಆತನ ಸಹಚರರಾದ ಕುಲದೀಪ್ ಸಿಂಗ್, ಸಲೀಂ ಅಹ್ಮದ್ ಮತ್ತು ಲಕ್ಷ್ಮಿನಾರಾಯಣ್ ಎಂಬವರು ಬಾಲಕಿ, ಕೂಲರ್‌ನಿಂದ ನೀರು ತೆಗೆಯುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ದಿಢೀರನೇ ಬಾಲಕಿಯ ಅಂತ್ಯಸಂಸ್ಕಾರ ನಡೆಸಿದ್ದಾಗಿ ಸಂತ್ರಸ್ತೆಯ ಕುಟುಂಬದವರು ಆಪಾದಿಸಿದ್ದರು.

ಅಹ್ಮದ್ ಹಾಗೂ ನಾರಾಯಣ ಅವರು ಪ್ರಾಥಮಿಕವಾಗಿ ಸಾಕ್ಷ್ಯ ನಾಶಪಡಿಸಲು ಸಹಕರಿಸಿದ್ದರು ಮತ್ತು ಬಾಲಕಿಯ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರು ಎಂದು ದೆಹಲಿ ಕೋರ್ಟ್‌ನಲ್ಲಿ ಪೊಲೀಸರು ನೀಡಿದ ಹೇಳಿಕೆಯಿಂದ ತಿಳಿದುಬಂದಿದೆ. ಪ್ರಮುಖ ಆರೋಪಿ ರಾಧೇಶ್ಯಾಂ ಪಾತ್ರದ ಬಗ್ಗೆ ಈ ಇಬ್ಬರು ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News