ರಾಹುಲ್‌ ಮಹಾತ್ಮಾ ಗಾಂಧಿಯನ್ನು ಅವಹೇಳಿಸಿದ್ದಾರೆಂದು ತಿರುಚಿದ ವೀಡಿಯೊ ಪ್ರಕಟಿಸಿದ ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ

Update: 2021-09-17 08:49 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಸಂಸದ  ರಾಹುಲ್ ಗಾಂಧಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಾರಿತ್ರ್ಯವನ್ನು ತಮ್ಮ ಭಾಷಣವೊಂದರಲ್ಲಿ ಪ್ರಶ್ನಿಸಿದ್ದಾರೆಂಬ ಅರ್ಥ ಕಲ್ಪಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ವಾಸ್ತವವಾಗಿ ರಾಹುಲ್ ಅವರ ಭಾಷಣದ ಒಂದು ತುಣುಕನ್ನು ಆಯ್ದುಕೊಂಡು ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಯತ್ನ ಇದಾಗಿದೆ ಎಂದು altnews.in ಕಂಡುಕೊಂಡಿದೆ.

"ನೀವು ಗಾಂಧೀಜಿ ಅವರ ಭಾವಚಿತ್ರಗಳನ್ನು ನೋಡಿರಬಹುದು. ಅದರಲ್ಲಿ ಅವರು ಮೂರು ಅಥವಾ ನಾಲ್ಕು ಮಹಿಳೆಯರ ಜತೆಗಿರುವುದನ್ನು ಕಾಣಬಹುದು. ಆದರೆ ಮೋಹನ್ ಭಾಗ್ವತ್ ಅವರು ಮಹಿಳೆಯೊಬ್ಬರ ಜತೆಗಿರುವ ಚಿತ್ರವನ್ನು ನೀವು ನೋಡಿದ್ದೀರಾ? ಅದು ಅಸಾಧ್ಯ" ಎಂದು ಈ 28 ಸೆಕೆಂಡ್ ಅವಧಿಯ ವೀಡಿಯೋದಲ್ಲಿ ರಾಹುಲ್ ಹೇಳುತ್ತಿರುವುದು ಕೇಳಿಸುತ್ತದೆ.

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕೂಡ ಈ ವೀಡಿಯೋ ಟ್ವೀಟ್ ಮಾಡಿ ರಾಹುಲ್ ಅವರನ್ನು ವ್ಯಂಗ್ಯವಾಡಿದ್ದಾರೆ, "ರಾಹುಲ್ ಅವರು ಮಹಾತ್ಮ ಗಾಂಧೀಜಿ ಅವರ ಸುತ್ತ ಇರುತ್ತಿದ್ದ ಮನುಬೆನ್, ಸರಲಾ ದೇವಿ, ಆಭಾ, ಸುಶೀಲಾ ಮತ್ತು ಇತರ ಮಹಿಳೆಯರ ಡೈರಿ ಹಾಗೂ ಸಂದರ್ಶನಗಳನ್ನು ಓದಿದ್ದರೆ ಪ್ರಾಯಶಃ ಇಂತಹ ಹೇಳಿಕೆ ನೀಡುತ್ತಿರಲಿಲ್ಲ, ಗಾಂಧೀಜಿ ಯಾವುದನ್ನೂ ಅಡಗಿಸಿಡುತ್ತಿರಲಿಲ್ಲ ಆದರೆ ಕಾಂಗ್ರೆಸ್ ಮಾತ್ರ ಬಹಳಷ್ಟು ಅಡಗಿಸಿಡುತ್ತಿದೆ" ಎಂದು  ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಏಷ್ಯಾನೆಟ್ ನ್ಯೂಸ್ ಹಾಗೂ ಇಂಡಿಯಾ ಟುಡೇ ಎಕ್ಸಿಕ್ಯುಟಿವ್ ಎಡಿಟರ್ ಶಿವ್ ಆರೂರ್ ಕೂಡ ಇದೇ ವೀಡಿಯೋ ಟ್ವೀಟ್ ಮಾಡಿದ್ದಾರೆ. ಮಹಾತ್ಮ ಗಾಂಧಿ 'ಸ್ತ್ರೀಲೋಲ' ಆಗಿದ್ದರೆಂದು ರಾಹುಲ್ ಪರೋಕ್ಷವಾಗಿ ಹೇಳುತ್ತಿದ್ದಾರೆಂದು ಹಲವು ಸಾಮಾಜಿಕ ಜಾಲತಾಣಿಗರು ರಾಹುಲ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.

ವಾಸ್ತವವೇನು?

ಈ ನಿರ್ದಿಷ್ಟ ವೀಡಿಯೋ ಕುರಿತು ಹೆಚ್ಚಿನ ಮಾಹಿತಿಗಾಗಿ ಆಲ್ಟ್ ನ್ಯೂಸ್, ಕಾಂಗ್ರೆಸ್ ಪಕ್ಷದ ಯುಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ,  ಸೆಪ್ಟೆಂಬರ್ 15,2021ರಂದು ರಾಹುಲ್ ಅವರು ಮಹಿಳಾ ಕಾಂಗ್ರೆಸ್ ಸ್ಥಾಪನಾ ದಿನದಂದು ಮಹಿಳಾ ಕಾಂಗ್ರೆಸ್ ಸದಸ್ಯೆಯರನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ತಿಳಿದು ಬಂದಿತ್ತು. ವೈರಲ್ ಆಗಿರುವ ವೀಡಿಯೋ ತುಣುಕಿನ  ಹೇಳಿಕೆ ಈ ಸಂಪೂರ್ಣ ವೀಡಿಯೋದ 17:52 ಅವಧಿಯಲ್ಲಿದೆ. ಅದರ ನಂತರ ರಾಹುಲ್ ಗಾಂಧಿ ಮಾತನಾಡಿರುವುದು ವೈರಲ್ ವೀಡಿಯೋದಲ್ಲಿಲ್ಲ. "ಅವರ (ಭಾಗ್ವತ್) ಅವರ ಸಂಘಟನೆ (ಆರಸ್ಸೆಸ್) ಮಹಿಳೆಯರನ್ನು ದಮನಿಸುತ್ತದೆ. ನಮ್ಮ ಸಂಘಟನೆ  ಮಹಿಳಾ ಸಬಲೀಕರಣಕ್ಕೆ ವೇದಿಕೆ ಕಲ್ಪಿಸುತ್ತದೆ" ಎಂದು ತಮ್ಮ ಹೇಳಿಕೆಗೆ ರಾಹುಲ್ ವಿವರಣೆ ನೀಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News