ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದ ಕೊಲ್ಕತ್ತಾ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವರ್ಗಾವಣೆ ಸಾಧ್ಯತೆ

Update: 2021-09-17 10:55 GMT
Photo: indianexpress

ಕೊಲ್ಕತ್ತಾ: ನಾರದಾ ಹಗರಣ ಸಂಬಂಧಿತ ಪ್ರಕರಣದ ವಿಚಾರಣೆಯನ್ನು ಹೈಕೋರ್ಟಿಗೆ ವರ್ಗಾಯಿಸಿದ ಹಾಗೂ ಸಿಬಿಐ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ನಾಲ್ಕು ಟಿಎಂಸಿ ನಾಯಕರುಗಳ ಜಾಮೀನಿಗೆ ಕೋರ್ಟ್ ಸಮಯದ ನಂತರ ನಡೆದ ವಿಚಾರಣೆಯಲ್ಲಿ ತಡೆಯಾಜ್ಞೆ ನೀಡಿ ವಿವಾದಕ್ಕೀಡಾಗಿದ್ದ ಕೊಲ್ಕತ್ತಾ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರನ್ನು  ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮಹತ್ವದ ನಿರ್ಧಾರವನ್ನು  ಗುರುವಾರ ಸಂಜೆ  ಸುಪ್ರೀಂ ಕೋರ್ಟ್ ಕೊಲೀಜಿಯಂ ತೆಗೆದುಕೊಂಡಿದೆ ಎನ್ನಲಾಗಿದೆ.

ಜಸ್ಟಿಸ್ ಬಿಂದಾಲ್ ಅವರನ್ನು ಕೊಲ್ಕತ್ತಾ ಹೈಕೋರ್ಟ್‍ನ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ಅಲ್ಲಿ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಎಪ್ರಿಲ್ 29ರಂದು ನೇಮಕ ಮಾಡಲಾಗಿತ್ತು.

ನಾರದಾ ಪ್ರಕರಣವನ್ನು ಹೈಕೋರ್ಟಿಗೆ ವರ್ಗಾಯಿಸಿರುವ ಜಸ್ಟಿಸ್ ಬಿಂದಾಲ್ ಕ್ರಮವನ್ನು ಹಾಗೂ ನಾಲ್ಕು ಟಿಎಂಸಿ ನಾಯಕರುಗಳಿಗೆ ದೊರೆತ ಜಾಮೀನಿಗೆ ತಡೆಯಾಜ್ಞೆ ನೀಡಿದ ಕ್ರಮದ ಕುರಿತಂತೆ ಪ್ರಶ್ನೆಗಳನ್ನೆತ್ತಿ ಕೊಲ್ಕತ್ತಾ ಹೈಕೋರ್ಟಿನ ಹಿರಿಯ ನ್ಯಾಯಾಧೀಶ ಜಸ್ಟಿಸ್ ಅರಿಂದಮ್ ಸಿನ್ಹಾ ಅವರು ಮುಖ್ಯ ನ್ಯಾಯಮೂರ್ತಿ ಬಿಂದಾಲ್ ಸಹಿತ ಎಲ್ಲಾ ಹೈಕೋರ್ಟ್ ನ್ಯಾಯಾಧೀಶರುಗಳಿಗೆ ಪತ್ರ ಬರೆದಿದ್ದರು.

ಮೇ 17ರಂದು ನಾಲ್ಕು ಟಿಎಂಸಿ ನಾಯಕರಿಗೆ ಕೊಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದಾಗ ಸಿಬಿಐ ಹೈಕೋರ್ಟಿಗೆ ಪತ್ರ ಬರೆದು  ಈ ಪ್ರಕರಣದ ವಿಚಾರಣೆಯನ್ನು  ಹೈಕೋಟಿಗೆ ವರ್ಗಾಯಿಸುವಂತೆ ಹಾಗೂ ಕೆಳಗಿನ ನ್ಯಾಯಾಲಯದ ಕಲಾಪಗಳನ್ನು ರದ್ದುಗೊಳಿಸುವಂತೆ ಕೋರಿತ್ತು. ಇದಕ್ಕೆ ಒಪ್ಪಿದ ಜಸ್ಟಿಜ್ ಬಿಂದಾಲ್, ಕೋರ್ಟ್ ಕಲಾಪದ ನಂತರದ ಅವಧಿಯಲ್ಲಿ ವಿಚಾರಣೆ ನಡೆಸಿದ್ದರು.

ನಂತರ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ವಿಚಾರಣೆಗೆ ನಿಯಮಗಳನ್ನು ಬದಿಗಿರಿಸಿ ಪಂಚ ಸದಸ್ಯರ ನ್ಯಾಯಪೀಠವನ್ನು ಹೈಕೋರ್ಟ್ ರಚಿಸಿತ್ತು.

ಕೊಲ್ಕತ್ತಾದಲ್ಲಿ ಸೇವೆ ಸಲ್ಲಿಸುವುದಕ್ಕಿಂತ ಮುಂಚೆ ಜಸ್ಟಿಸ್ ಬಿಂದಾಲ್ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News