ನ್ಯೂಸ್‍ಲಾಂಡ್ರಿ ಕಚೇರಿಯಲ್ಲಿ ಐಟಿ 'ಸಮೀಕ್ಷೆ': ವಶಪಡಿಸಿಕೊಳ್ಳಲಾದ ಯಾವುದೇ ಮಾಹಿತಿ ಸೋರಿಕೆ ಮಾಡದಂತೆ ಕೋರಿಕೆ

Update: 2021-09-17 11:53 GMT

ಹೊಸದಿಲ್ಲಿ: ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ 'ಸಮೀಕ್ಷೆ' ವೇಳೆ ವಶಪಡಿಸಿಕೊಳ್ಳಲಾದ ಸ್ವತ್ತುಗಳಿಂದ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡದಂತೆ ಕ್ರಮಕೈಗೊಳ್ಳುವಂತೆ ಕೋರಿ ಆನ್‍ಲೈನ್ ಸುದ್ದಿತಾಣ ನ್ಯೂಸ್‍ಲಾಂಡ್ರಿ ಮತ್ತದರ ಸಹಸ್ಥಾಪಕ ಅಭಿನಂದನ್ ಸೇಖ್ರಿ ಅವರು ಸಲ್ಲಿಸಿರುವ ಅಪೀಲಿನ ಕುರಿತಂತೆ ಆದಾಯ ತೆರಿಗೆ ಇಲಾಖೆಯ ನಿಲುವನ್ನು ದಿಲ್ಲಿ ಹೈಕೋರ್ಟ್ ಇಂದು ಕೇಳಿದೆ.

ಯಾವುದೇ ಮಾಹಿತಿಯನ್ನು ಸೋರಿಕೆ ಮಾಡದಂತೆ ಲಿಖಿತ ಒಪ್ಪಿಗೆ ನೀಡುವ ಕುರಿತು ಸೂಚನೆ ಪಡೆಯಲು ಆದಾಯ ತೆರಿಗೆ ಇಲಾಖೆಯ ವಕೀಲರಿಗೆ ಸಮಯಾವಕಾಶ ನೀಡಿದ ಜಸ್ಟಿಸ್ ಮನಮೋಹನ್ ಹಾಗೂ ಜಸ್ಟಿಸ್ ನವೀನ್ ಚಾವ್ಲಾ ಆವರ ಪೀಠ ಮುಂದಿನ ವಿಚಾರಣೆ ದಿನಾಂಕವಾದ ಸೆಪ್ಟಂಬರ್ 21ರಂದು ಖುದ್ದಾಗಿ ಹಾಜರಾಗುವಂತೆ ಸಂಬಂಧಿತ ಅಧಿಕಾರಿಗೆ ಸೂಚಿಸಿದೆ.

"ಸಾಮಾನ್ಯವಾಗಿ ವಶಪಡಿಸಿಕೊಳ್ಳಲಾಗುವ ಯಾರ ಡೇಟಾ ಕೂಡ ಸೋರಿಕೆ ಮಾಡಬಾರದು, ಅದು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ತಪ್ಪು, ನಾವು ಚಾನೆಲ್‍ಗಳಲ್ಲಿ ನೋಡಿದ್ದೇವೆ, ವಶಪಡಿಸಿಕೊಳ್ಳಲಾದ ಜನರ ಡೇಟಾವನ್ನು ಪ್ರದರ್ಶಿಸಲಾಗುತ್ತದೆ, ಇದು ನಡೆಯಬಾರದು" ಎಂದು ಪೀಠ ಮೌಖಿಕವಾಗಿ ತಿಳಿಸಿತು.

ನ್ಯೂಸ್‍ಲಾಂಡ್ರಿ ಪರ ವಕೀಲ ಸಿದ್ಧಾರ್ಥ್ ದವೆ ಮಾತನಾಡಿ "ಸಮೀಕ್ಷೆ ಸಂದರ್ಭ ಮೊಬೈಲ್ ಫೋನ್, ಲ್ಯಾಪ್‍ಟಾಪ್ ಸಹಿತ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಆದಾಯ ತೆರಿಗೆಗೆ ಸಂಬಂಧಿಸದ ಮಾಹಿತಿಯಿರಬಹುದು ಹಾಗೂ ಖಾಸಗಿ ಫೋಟೋಗಳು ಮತ್ತು ತನಿಖಾ ವರದಿಗಳ ಕುರಿತು ಮಾಹಿತಿಯಿರಬಹುದು ಹಾಗೂ ಯಾವುದೇ ಡೇಟಾ ಸೋರಿಕೆಯು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಲಿದೆ, ಆದುದರಿಂದ ಮಾಹಿತಿ ಸೋರಿಕೆ ಮಾಡದಂತೆ ಸೂಚಿಸಬೇಕು"' ಎಂದು ಕೋರಿಕೊಂಡರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News