ಸೋನು ಸೂದ್ ನಿವಾಸಕ್ಕೆ ಸತತ ಮೂರನೇ ದಿನ ಐಟಿ ದಾಳಿ

Update: 2021-09-17 12:28 GMT

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ಸಂದರ್ಭ ಕಷ್ಟದಲ್ಲಿದ್ದ ನೂರಾರು ಮಂದಿಗೆ ಆಪತ್ಬಾಂಧವರಾಗಿ ಜನಾನುರಾಗಿಯಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರ ಮುಂಬೈ ನಿವಾಸಕ್ಕೆ ಇಂದು ಸತತ ಮೂರನೇ ದಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ದಾಳಿ ನಡೆಸಿದ್ದಾರೆ. ಭೂ ಒಪ್ಪಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಶಿವಸೇನೆ ಸಹಿತ ಆಮ್ ಆದ್ಮಿ ಪಕ್ಷ ಹಾಗೂ ಇತರ ಪಕ್ಷಗಳ ವ್ಯಾಪಕ ಟೀಕೆಗಳ ಹೊರತಾಗಿಯೂ ದಾಳಿ ನಡೆದಿದೆ. ಈಗಾಗಲೇ ನಟನಿಗೆ ಸೇರಿದ ಹಲವಾರು ಕಡಗಳಲ್ಲಿ ದಾಳಿ ನಡೆದಿದೆ.

ಇತ್ತೀಚೆಗಷ್ಟೇ ಸೋನು ಸೂದ್ ಅವರು  ದಿಲ್ಲಿಯ ಆಪ್ ಸರಕಾರದ  ಜತೆಗೆ ಒಪ್ಪಂದವೊಂದಕ್ಕೆ ಬಂದಿದ್ದರಲ್ಲದೆ ಅವರನ್ನು  ದಿಲ್ಲಿ ಸರಕಾರದ `ದೇಶ್ ಕಿ ಮೆಂಟರ್' ಕಾರ್ಯಕ್ರಮದ ಬ್ರ್ಯಾಂಡ್ ರಾಯಭಾರಿಯನ್ನಾಗಿಯೂ ಆರಿಸಲಾಗಿತ್ತು.

ಮೂಲಗಳ ಪ್ರಕಾರ ಸೋನು ಸೂದ್ ಅವರ ಕಂಪೆನಿ ಹಾಗೂ ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಡುವಿನ ಒಪ್ಪಂದವೊಂದು ತನಿಖೆಯಲ್ಲಿದೆ, ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ತೆರಿಗೆ ವಂಚನೆ ಆರೋಪವಿದೆ ಎನ್ನಲಾಗಿದೆ.

ಈ ಹಿಂದೆ 2012ರಲ್ಲಿಯೂ ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಸೋನು ಸೂದ್ ಮೇಲೆ ಐಟಿ ದಾಳಿ ನಡೆದಿತ್ತು.

ಕೇಜ್ರಿವಾಲ್ ಸರಕಾರ ಹಾಗೂ ಸೋನು ಸೂದ್ ನಡುವಿನ ಒಪ್ಪಂದಕ್ಕೂ ಈ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಬಿಜೆಪಿ ವಕ್ತಾರರೊಬ್ಬರು, "ಇದು ದಾಳಿಯಲ್ಲ ಕೇವಲ ಶೋಧ. ಆದಾಯ ತೆರಿಗೆ ಒಂದು ಸ್ವತಂತ್ರ ಸಂಸ್ಥೆಯಗಿದೆ ಹಾಗೂ ಅದಕ್ಕೆ ತನ್ನದೇ ಆದ ಶಿಷ್ಟಾಚಾರವಿದೆ, ಅದು ತನ್ನ ಕೆಲಸ ಮಾಡುತ್ತಿದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News