ಸಮಾಜದ ಶ್ರೇಷ್ಠ ಕಾರ್ಯಕ್ಷೇತ್ರ ಪೊಲೀಸ್ ಇಲಾಖೆ : ಡಾ. ಡಿ. ವೀರೇಂದ್ರ ಹೆಗ್ಗಡೆ

Update: 2021-09-17 13:13 GMT

ಮಂಗಳೂರು, ಸೆ.17: ಸಮಾಜದ ಸುರಕ್ಷತೆ ಹಾಗೂ ಹಿತ ಕಾಪಾಡುವಲ್ಲಿ ಶ್ರೇಷ್ಠ ಕ್ಷೇತ್ರ ಪೊಲೀಸ್ ಇಲಾಖೆಯದ್ದಾಗಿದೆ. ಸಮಾಜದಲ್ಲಿ ಶಿಸ್ತನ್ನು ಕಾಪಾಡುವ ಜತೆಗೆ ರಕ್ಷಣೆ ಮಾಡುವ ಅವಕಾಶಕ್ಕೊಂದು ದಾರಿ ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರದಿಂದ ಜಿಲ್ಲೆಯ ಯುವ ಪ್ರತಿಭೆಗಳಿಗೆ ದೊರಕಿಗೆ ಎಂದು ಧರ್ಮಸ್ಥಳಧ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ಸಂತ ಅಲೋಶಿಯಸ್ ಕೊನ್ಝಾಗಾ ಸ್ಕೂಲ್‌ನ ಸಭಾಂಗಣದಲ್ಲಿ ಮಂಗಳೂರು ನಗರ ಪೊಲೀಸ್ ವತಿಯಿಂದ ಪೊಲೀಸ್ ಆಕಾಂಕ್ಷಿಗಳಿಗಾಗಿ ನಡೆದ ಒಂದು ತಿಂಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಾಲ್ಯಾವಸ್ಥೆಯಲ್ಲಿ ಸಹಜವಾಗಿ ಬಹುತೇಕ ಮಕ್ಕಳಿಗೆ ತಾವು ಮುಂದೆ ಪೊಲೀಸ್ ಆಗಬೇಕೆಂಬ ಬಯಕೆ ಇರುತ್ತದೆಯಾದರೂ ಪ್ರೌಢಾವಸ್ಥೆಗೆ ತಲುಪಿದಾಗ ಸುಖಕರ ಬದುಕಿನ ಆಕಾಂಕ್ಷೆಯು ಪೊಲೀಸ್ ಇಲಾಖೆಗೆ ಸೇರುವ ಆಸಕ್ತಿಯಿಂದ ವಿಮುಖಗೊಳಿಸುತ್ತದೆ. ಆದರೆ ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವವರು ತಮ್ಮ ಸ್ವ ಇಚ್ಛೆಯಿಂದ ತರಬೇತಿಗೆ ಮುಂದಾಗಿರುವುದರಿಂದ ಸಮಾಜದ ಋಣ ತೀರಿಸಲು ಇದೊಂದು ಉತ್ತಮ ಅವಕಾಶಕ್ಕೆ ದಾರಿಯಾಗಲಿದೆ ಎಂದವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರಕ್ಕೆ 734 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಅವರಲ್ಲಿ 206 ಮಂದಿಯನ್ನು ಆಯ್ಕೆ ಮಾಡಿ ಒಂದು ತಿಂಗಳ ಕಾಲ ತರಬೇತಿಯನ್ನು ನೀಡಲಾಯಿತು.

ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ 115 ಪುರುಷಕರು, 91 ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ 53 ಅಭ್ಯರ್ಥಿಗಳು ಪಿಯುಸಿ 122 ಮಂದಿ ಪದವಿ ಶಿಕ್ಷಣ ಪಡೆಯುತ್ತಿರುವವರು ಹಾಗೂ 19 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದು, 8 ಮಂದಿ ಇತರ ಶಿಕ್ಷಣ ಪಡೆದವರಾಗಿದ್ದಾರೆ. ದ.ಕ. ಜಿಲ್ಲೆಯ 162 ಅಭ್ಯರ್ಥಿಗಳು, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ 42 ಅಭ್ಯರ್ಥಿಗಳೂ ತರಬೇತಿಯಲ್ಲಿ ಭಾಗವಹಿಸಿದ್ದರು.

ತರಬೇತಿ ಕಾರ್ಯಾಗಾರದ ಕೊಠಡಿ ಹಾಗೂ ಗ್ರಂಥಾಲಯವನ್ನು ಸಂತ ಅಲೋಶಿಯಸ್ ಕಾಲೇಜು ಒದಗಿಸಿದ್ದು, 100 ಮಂದಿ ಪುರುಷ ಅಭ್ಯರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕೂಡಾ ಸಂಸ್ಥೆ ಒದಗಿಸಿತ್ತು. ಇದೇ ವೇಳೆ 65 ಮಹಿಳಾ ಅಭ್ಯರ್ಥಿಗಳಿಗೆ ಶಾಂತಿಕಿರಣ ಸಂಸ್ಥೆಯವರು ಹಾಸ್ಟೆಲ್ ವ್ಯವಸ್ಥೆ ಒದಗಿಸಿದೆ. 14 ಪಿಎಸ್‌ಐ, 6 ಮಂದಿ ಪ್ರೊಬೆಷನರಿ ಪಿಎಸ್‌ಐ, 2 ಸಿಪಿಸಿ ಹಾಗೂ ಕೆನರಾ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಶಾಂತ್ ಭಟ್‌ರವರು ತರಬೇತಿ ಒದಗಿಸಿದ್ದಾರೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಲಾಏಜಿನ ರೆಕ್ಟರ್ ಫಾ ಮೆಲ್ವಿನ್ ಜೋಸೆಫ್ ಪಿಂಟೋ, ಇಸ್ಕಾನ್ ಕಾರ್ಯದರ್ಶಿ ಸನಂದನ ದಾಸ್, ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಪ್ರಮುಖರಾದ ಭಾಸ್ಕರ ಕೆ., ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಡಿಸಿಪಿ ಗಳಾದ ಹರಿರಾಂ ಶಂಕರ್, ಬಿ.ಪಿ. ದಿನೇಶ್ ಕುಮಾರ್, ಎಎನ್‌ಎಫ್ ಮಂಗಳೂರು ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಮೊದಲಾದವರು ಉಪಸ್ಥಿತರಿದ್ದರು.

ಸಿನೆಮಾಗಳಲ್ಲಿ ಪೊಲೀಸರ ಹಾಸ್ಯ ಪಾತ್ರ ಸಲ್ಲದು

ಖಾಕಿ ವಸ್ತ್ರ ಗಂಭೀರತೆ, ಶಿಸ್ತಿಗೆ ದ್ಯೋತಕವಾಗಿದೆ. ಆದರೆ ಸಿನೆಮಾಗಳಲ್ಲಿ ಖಾಕಿ ಧರಿಸಿದ ಪೊಲೀಸ್ ಪಾತ್ರಧಾರಿಯನ್ನು ಹಾಸ್ಯಗಾರರನ್ನಾಗಿ ಬಿಂಬಿಸುವುದು, ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ನೋಡಿದಾಗ ನನಗೆ ಬೇಸರವಾಗುತ್ತದೆ. ಇದು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುವುದಲ್ಲದೆ, ಪೊಲೀಸರ ಬಗ್ಗೆ ಸಮಾಜದ ದೃಷ್ಟಿಕೋನವನ್ನು ಲಘುವಾಗಿ ಕಾಣುವಂತೆ ಮಾಡುತ್ತದೆ. ಅದಕ್ಕೆ ಯಾವತ್ತೂ ಆಸ್ಪದ ನೀಡಬಾರದು ಎಂದು ಪದ್ಮವಿಭೂಷಣ ಪುರಸ್ಕೃತ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದರು.

ನೈಜ ಖಾಕಿಧಾರಿಗಳಿಂದ ತರಬೇತಿಯ ಅವಕಾಶ

ಯಾವುದೇ ಕೋಚಿಂಗ್ ಕ್ಲಾಸ್‌ಗಳಲ್ಲಿ ದೊರೆಯಲಾರದ ತರಬೇತಿಯನ್ನು ಪಡೆಯುವ ಅವಕಾಶ ನಮಗೆ ಒಂದು ತಿಂಗಳ ಅವಧಿಯಲ್ಲಿ ದೊರಕಿದೆ. ನೈಜ ಪೊಲೀಸ್ ಅಧಿಕಾರಿಗಳಿಂದ ಪಾಠ ಕೇಳುವ ಗಮ್ಮತ್ತೇ ವಿಭಿನ್ನ. ಸೂತ್ರವಿಲ್ಲದ ಗಾಳಿಪಟದಂತಿದ್ದ ನನ್ನಂತಹ ಪೊಲೀಸ್ ಆಕಾಂಕ್ಷಿಗಳಿಗೆ ಹೇಗೆ ಹಾರಬೇಕೆಂಬುದನ್ನು ತರಬೇತಿಯ ಮೂಲಕ ಮಂಗಳೂರು ಪೊಲೀಸ್ ತಂಡ ತೋರಿಸಿಕೊಟ್ಟಿದೆ ಎಂದು ಪಿಎಸ್‌ಐ ಹುದ್ದೆಯ ತರಬೇತಿ ಪಡೆದ ಮಿಲನ್ ಎಂಬ ಅಭ್ಯರ್ಥಿ ಅನಿಸಿಕೆ ವ್ಯಕ್ತಪಡಿಸಿದರು.

ತರಬೇತಿ ಆರಂಭಗೊಂಡ ದಿನದಂದು ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಅಸಾಧ್ಯವೆಂದು ತರಬೇತಿಯಿಂದ ಹಿಂತಿರುಗಲು ಮುಂದಾಗಿದ್ದ ತರಕಾರಿ ಮಾರುವ ಹುಡುಗಿಯಾದ ನನಗೆ ನಾನೇನು ಮಾಡಬಹುದು ಎಂಬ ಆತ್ಮಸ್ಥೈರ್ಯವನ್ನು ಈ ತರಬೇತಿ ನೀಡಿದೆ ಎಂದು ಪಿಸಿ ಹುದ್ದೆ ಆಕಾಂಕ್ಷಿ  ಗಾಯತ್ರಿ ಅನಿಸಿಕೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News