ಸೋನು ಸೂದ್‌ ವಿರುದ್ಧದ ವಂಚನೆಯ ಆಟ ಬಿಜೆಪಿಗೆ ಮುಳುವಾಗಲಿದೆ: ಐಟಿ ದಾಳಿ ಕುರಿತು ಬಿಜೆಪಿಗೆ ಶಿವಸೇನೆ ಹೇಳಿಕೆ

Update: 2021-09-17 16:39 GMT

ಮುಂಬೈ, ಸೆ. 17: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ಕುರಿತಂತೆ ಶಿವಸೇನೆ ಶುಕ್ರವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ಹಿಂದೆ ಲಾಕ್ಡೌನ್ ಸಂದರ್ಭ ಸೋನು ಸೂದ್ ಅವರ ಸಮಾಜಮುಖಿ ಕಾರ್ಯಗಳನ್ನು ಬಿಜೆಪಿ ಪ್ರಶಂಸಿಸಿತ್ತು. ಆದರೆ, ದಿಲ್ಲಿ ಹಾಗೂ ಪಂಜಾಬ್ ಸರಕಾರ ಅವರೊಂದಿಗೆ ಕೈಜೋಡಿಸಲು ಪ್ರಯತ್ನಿಸಿದ ಬಳಿಕ ಅವರನ್ನು ತೆರಿಗೆ ವಂಚಕ ಎಂದು ಪರಿಗಣಿಸಿದೆ ಎಂದು ಶಿವಸೇನೆ ಹೇಳಿದೆ. 

ಸೋನು ಸೂದ್ ವಿರುದ್ಧದ ಈ ವಂಚನೆಯ ಆಟ ಬಿಜೆಪಿಗೆ ತಿರುಗು ಬಾಣವಾಗಲಿದೆ. ಜಗತ್ತಿನಲ್ಲೇ ಅತ್ಯಧಿಕ ಸದಸ್ಯರಿರುವ ಪಕ್ಷ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿಗೆ ಹೃದಯ ವೈಶಾಲ್ಯತೆ ಕೂಡ ಬೇಕು ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಹೇಳಿದೆ. ‘‘ಮಹಾ ವಿಕಾಸ ಅಘಾದಿ (ಎಂವಿಎ) ಸಚಿವರ ವಿರುದ್ಧ ಪ್ರಕರಣ ದಾಖಲಿಸುವುದು, ರಾಜ್ಯ ವಿಧಾನ ಪರಿಷತ್ಗೆ 12 ಮಂದಿ ಸದಸ್ಯರ ನಾಮನಿರ್ದೇಶನವನ್ನು ತಡೆ ಹಿಡಿಯುವಂತೆ ರಾಜ್ಯಪಾಲರಿಗೆ ಒತ್ತಡ ಹೇರುವುದು, ಸೋನು ಸೂದ್ ಅವರಂತಹ ನಟರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸುವುದು ಬಿಜೆಪಿಯ ಸಂಕುಚಿತ ಮನೋಭಾವನೆಯನ್ನು ತೋರಿಸುತ್ತದೆ. ಇದು ಕೃತ್ತಿಮ ಆಟ. ಒಂದು ದಿನ ಇದು ಬಿಜೆಪಿಗೆ ತಿರುಗುಬಾಣವಾಗಲಿದೆ’’ ಎಂದು ಶಿವಸೇನೆ ಹೇಳಿದೆ. 

ಕೋವಿಡ್ ನ ಮೊದಲನೆ ಅಲೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಲಾಕ್ಡೌನ್ ಹೇರಿದ ಸಂದರ್ಭ ಬಡ ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು, ಆಹಾರ, ವಸತಿ ನೀಡುವ ಮೂಲಕ ಸೋನು ಸೂದ್ ಅವರು ಬಿಜೆಪಿಯ ಪ್ರಶಂಸೆಗೆ ಒಳಗಾಗಿದ್ದರು ಎಂದು ಶಿವಸೇನೆ ತಿಳಿಸಿದೆ. ಆಗ ಕೇಂದ್ರ ಸರಕಾರ ಸೋನು ಸೂದ್ ಅವರನ್ನು ಪ್ರಶಂಸಿಸಿತ್ತು ಹಾಗೂ ಮಹಾ ವಿಕಾಸ ಅಘಾದಿ ಇದನ್ನು ಯಾಕೆ ಮಾಡಬಾರದು ಎಂದು ಪ್ರಶ್ನಿಸಿತ್ತು. ಬಿಜೆಪಿ ಸೋನು ಸೂದ್ ಅವರನ್ನು ತನ್ನವರು ಎಂದು ಬಿಂಬಿಸಿತ್ತು. ಆದರೆ, ಸೋನು ಸೂದ್ ಅವರು ಅರವಿಂದ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರದ ಶಿಕ್ಷಣ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆದ ಮೇಲೆ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎಂದು ಶಿವಸೇನೆ ಆರೋಪಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News