"ಟಿಎಂಸಿ ಸೇರುವ ನಿರ್ಧಾರ ಸೇಡಿನ ರಾಜಕಾರಣವಲ್ಲ, ಅವಕಾಶದ ರಾಜಕಾರಣ" ಎಂದ ಬಾಬುಲ್ ಸುಪ್ರಿಯೋ

Update: 2021-09-18 12:34 GMT

Photo: Twitter/@SaikatM04116413
 

ಕೊಲ್ಕತ್ತಾ: "ಟಿಎಂಸಿ ಸೇರುವ ನನ್ನ ನಿರ್ಧಾರ ಸೇಡಿನ ರಾಜಕಾರಣವಲ್ಲ ಬದಲು ಅವಕಾಶದ ರಾಜಕಾರಣ'' ಎಂದು ಇಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ರಾಜ್ಯಸಭಾ ಸಂಸದ ಡೆರೆಕ್ ಒ ಬ್ರಿಯಾನ್ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ ಅಸನ್ಸೋಲ್ ಸಂಶದ ಹಾಗೂ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.

ಟಿಎಂಸಿ ಸೇರಿದ ಬೆನ್ನಲ್ಲೇ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ತಾವು ಸಕ್ರಿಯ ರಾಜಕಾರಣ ತೊರೆಯುವುದಾಗಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು "ನಾನು ನನ್ನ ಅಂತರಾಳದಿಂದ ಹೇಳಿದ ಮಾತು ಅದಾಗಿತ್ತು. ಆದರೆ ನನ್ನ  ಮೇಲೆ ದೊಡ್ಡ ಅವಕಾಶವೊಂದನ್ನು ಹೊರಿಸಲಾಗಿದೆ ಎಂದು ನನಗೆ ಅನಿಸಿತ್ತು. ರಾಜಕಾರಣ ತೊರೆಯುವ ನನ್ನ ನಿರ್ಧಾರ ತಪ್ಪು ಹಾಗೂ ಭಾವನಾತ್ಮಕ ಎಂದು ನನ್ನ ಎಲ್ಲಾ ಸ್ನೇಹಿತರು  ಹೇಳಿದ್ದರು" ಎಂದು ತಿಳಿಸಿದರು.

"ನಾನು ನನ್ನ ಹಿಂದಿನ ನಿರ್ಧಾರ ಬದಲಿಸಿರುವುದಕ್ಕೆ ಹೆಮ್ಮೆಯಿದೆ. ಬಂಗಾಳದ ಸೇವೆಗಾಗಿ ವಾಪಸಾಗುತ್ತಿದ್ದೇನೆ. ನನಗೆ ಖುಷಿಯಾಗಿದೆ. ಸೋಮವಾರ ನಾನು ದೀದಿ (ಸೀಎಂ ಮಮತಾ ಬ್ಯಾನರ್ಜಿ) ಅವರನ್ನು ಭೇಟಿಯಾಗುತ್ತೇನೆ. ನನಗೆ ದೊರಕಿದ ಹೃದಯಸ್ಪರ್ಶಿ ಸ್ವಾಗತದಿಂದ ಭಾವಪರವಶನಾಗಿದ್ದೇನೆ" ಎಂದು ಅವರು ಹೇಳಿದರು.

ಬಾಬುಲ್ ಅವರು ಅಸನ್ಸೋಲ್‍ನಿಂದ ಬಿಜೆಪಿ ಸಂಸದರಾಗಿರುವ ತಮ್ಮ ಸ್ಥಾನವನ್ನು ತೊರೆಯಲಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News