ಒಂದು ದಿನಕ್ಕೆ ಅಹ್ಮದಾಬಾದ್ ನ ಜಿಲ್ಲಾಧಿಕಾರಿಯಾದ ಮಿದುಳು ಟ್ಯೂಮರ್ ಪೀಡಿತ ಬಾಲಕಿ

Update: 2021-09-19 15:55 GMT
photo: twitter.com/jayman_sharma

ಅಹ್ಮದಾಬಾದ್,ಸೆ.19: ಮಿದುಳು ಟ್ಯೂಮರ್ ನಿಂದ ನರಳುತ್ತಿರುವ 11ರ ಹರೆಯದ ಬಾಲಕಿ ಫ್ಲೋರಾ ಅಸೋದಿಯಾಳನ್ನು ಶನಿವಾರ ಒಂದು ದಿನದ ಮಟ್ಟಿಗೆ ಅಹ್ಮದಾಬಾದ್ ಜಿಲ್ಲಾಧಿಕಾರಿಯನ್ನಾಗಿ ಮಾಡುವ ಮೂಲಕ ಅಧಿಕಾರಿಗಳು ಆಕೆಯ ಬಯಕೆಯನ್ನು ಈಡೇರಿಸಿದ್ದಾರೆ.

ಅಹ್ಮದಾಬಾದ್ ಜಿಲ್ಲಾಧಿಕಾರಿ ಸಂದೀಪ್ ಸಾಗಳೆಯವರನ್ನು ಸಂಪರ್ಕಿಸಿದ್ದ ‘ಮೇಕ್ ಎ ವಿಷ್ ಫೌಂಡೇಷನ್ ’ಜಿಲ್ಲಾಧಿಕಾರಿಯಾಗಬೇಕೆಂಬ ಫ್ಲೋರಾಳ ಕನಸನ್ನು ತಿಳಿಸಿ,ಅದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿತ್ತು. ಇದಕ್ಕೆ ಸ್ಪಂದಿಸಿದ ಸಾಗಳೆ ಶನಿವಾರ ಬೆಳಿಗ್ಗೆ ಗಾಂಧಿನಗರದ ಸರ್ಗಾಸನ ಬಡಾವಣೆಯಲ್ಲಿರುವ ಫ್ಲೋರಾಳ ಮನೆಗೆ ತನ್ನ ಅಧಿಕೃತ ವಾಹನವನ್ನು ಕಳುಹಿಸಿ ಆಕೆಯನ್ನು ತನ್ನ ಕಚೇರಿಗೆ ಬರಮಾಡಿಕೊಂಡಿದ್ದರು. ‌

ಜಿಲ್ಲಾಧಿಕಾರಿಗಳ ಚೇಂಬರ್ ಗೆ ಫ್ಲೋರಾಳನ್ನು ಕರೆದೊಯ್ದು ಆಕೆ ಅವರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ‘ಫ್ಲೋರಾ ಕಳೆದ ಏಳು ತಿಂಗಳುಗಳಿಂದಲೂ ಮಿದುಳು ಟ್ಯೂಮರ್ನಿಂದ ನರಳುತ್ತಿದ್ದಾಳೆ. ಓದಿನಲ್ಲಿ ಮುಂದಿದ್ದ ಆಕೆ ದೊಡ್ಡವಳಾದ ಮೇಲೆ ಜಿಲ್ಲಾಧಿಕಾರಿಯಾಗುವ ಕನಸನ್ನು ಹೊತ್ತಿದ್ದಳು. ಫ್ಲೋರಾಳ ಬಯಕೆಯ ಬಗ್ಗೆ ಮೇಕ್ ಎ ವಿಷ್ ಫೌಂಡೇಷನ್ ನನಗೆ ಮಾಹಿತಿ ನೀಡಿತ್ತು. ಅದಕ್ಕೆ ಹೃತ್ಪೂರ್ವಕವಾಗಿ ಒಪ್ಪಿ,ಆಕೆಯ ಮನೆಗೆ ನಮ್ಮ ಅಧಿಕಾರಿಗಳನ್ನು ಕಳುಹಿಸಿದ್ದೆ ’ ಎಂದು ಸಾಗಳೆ ತಿಳಿಸಿದರು.

ಕಚೇರಿಯಲ್ಲಿ ಕೇಕ್ ಕತ್ತರಿಸಿ ಫ್ಲೋರಾಳ ಹುಟ್ಟುಹಬ್ಬವನ್ನು ಆಚರಿಸಿದ ಅಧಿಕಾರಿಗಳು ಆಕೆಗೆ ಬಾರ್ಬಿ ಬೊಂಬೆ ಮತ್ತು ಒಂದು ಟ್ಯಾಬ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಿಲ್ಲಾಧಿಕಾರಿಯ ಅಧಿಕಾರವನ್ನು ಚಲಾಯಿಸಿದ ಫ್ಲೋರಾ ‘ವಹಾಲಿ ದಿಕ್ರಿ ಯೋಜನಾ’ ಮತ್ತು ವಿದ್ಯಾ ಸಹಾಯ ಯೋಜನಾ’ದ ಅಡಿ ನೆರವನ್ನು ವಿತರಿಸಿದಳು.

‘ನನ್ನ ಮಗಳು ಸದಾ ಓದಿನಲ್ಲಿ ಮುಂದಿದ್ದಳು. ತಾನು ಏನಾದರನ್ನು ಮಾಡಬೇಕು ಮತ್ತು ಇತರರಿಗೆ ಒಳ್ಳೆಯ ಬದುಕನ್ನು ನೀಡಬೇಕು ಎಂದು ಆಕೆ ಹೇಳುತ್ತಿದ್ದಳು’ ಎಂದು ಫ್ಲೋರಾಳ ತಾಯಿ ಅಪೂರ್ವಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News