ಪುತ್ರಿಯರು ಎಂದೆಂದೂ ಪುತ್ರಿಯರೇ, ಪುತ್ರರು ಮದುವೆಯಾಗುವವರೆಗೆ ಮಾತ್ರ ಪುತ್ರರು: ಬಾಂಬೆ ಉಚ್ಚ ನ್ಯಾಯಾಲಯ

Update: 2021-09-19 15:36 GMT

ಮುಂಬೈ,ಸೆ.19: ಹಿರಿಯ ನಾಗರಿಕರು ಯಾವುದೇ ಕಿರುಕುಳಗಳಿಂದ ಮುಕ್ತವಾದ ಸಹಜ ಬದುಕನ್ನು ಸಾಗಿಸುವಂತಾಗಲು ಅವರ ಅಗತ್ಯಗಳನ್ನು ಪೂರೈಸಲು ಮಕ್ಕಳು ಅಥವಾ ಬಂಧುಗಳು ಬದ್ಧರಾಗಿದ್ದಾರೆ ಎಂದು ಹಿರಿಯ ನಾಗರಿಕರ ಕಾಯ್ದೆಯು ಸ್ಪಷ್ಟಪಡಿಸಿದೆ ಎಂದು ಹೇಳಿರುವ ಬಾಂಬೆ ಉಚ್ಚ ನ್ಯಾಯಾಲಯವು,ಒಂದು ತಿಂಗಳಲ್ಲಿ ತನ್ನ ವೃದ್ಧ ಹೆತ್ತವರ ಫ್ಲಾಟ್ ಅನ್ನು ಖಾಲಿ ಮಾಡುವಂತೆ ಮುಂಬೈ ನಿವಾಸಿ ಮತ್ತು ಆತನ ಪತ್ನಿಗೆ ಆದೇಶಿಸಿದೆ.

ಮಗ ತನ್ನ ಕುಟುಂಬದೊಂದಿಗೆ ತನ್ನ 90ರ ಹರೆಯದ ತಂದೆ ಪುತ್ರಿಗೆ ಉಡುಗೊರೆಯಾಗಿ ನೀಡಿರುವ ಫ್ಲಾಟ್ ಅನ್ನು ಬಲವಂತದಿಂದ ಕಬಳಿಸಲು ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಅಲ್ಲಿ ವಾಸವಾಗಿದ್ದಾನೆ. ಇದು ಕಿರುಕುಳವಾಗಿದ್ದು,ಹೆತ್ತವರ ಸಹಜ ಬದುಕಿನ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಹೇಳಿದ್ದ ನ್ಯಾಯಾಲಯವು, ಜೀವನಾಂಶ ನ್ಯಾಯಮಂಡಳಿಯು ಫ್ಲಾಟ್ ಅನ್ನು ತೆರವುಗೊಳಿಸುವಂತೆ ಸೂಚಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಪುತ್ರಿಯರು ಎಂದಿಗೂ ಹೆತ್ತವರ ಬೆಂಬಲಕ್ಕಿರುತ್ತಾರೆ,ಆದರೆ ಪುತ್ರರು ಮದುವೆಯಾಗುವವರೆಗೆ ಮಾತ್ರ ಅವರೊಂದಿಗಿರುತ್ತಾರೆ ಎಂಬ ಹಳೆಯ ನಾಣ್ಣುಡಿಯನ್ನು ಪುನರುಚ್ಚರಿಸಿದ ನ್ಯಾಯಾಲಯವು,ಇದಕ್ಕೆ ಖಂಡಿತ ಅಪವಾದಗಳಿವೆಯಾದರೂ ತಮ್ಮ ಒಬ್ಬನೇ ಮಗ ಮತ್ತು ಸೊಸೆಯಿಂದ ವೃದ್ಧ ಹೆತ್ತವರು ನರಳುತ್ತಿರುವ ಈ ಪ್ರಕರಣ ಈ ಹಳೆಯ ನಾಣ್ಣುಡಿಯಲ್ಲಿ ಸತ್ಯವಿದೆ ಎನ್ನುವುದನ್ನು ತೋರಿಸಿದೆ. ಕಕ್ಷಿದಾರರ ನಡುವಿನ ಹಲವಾರು ಕಾನೂನು ಸಮರಗಳು ಹೆತ್ತವರು ಚಿತ್ರಹಿಂಸೆ ಮತ್ತು ಕಿರುಕುಳದ ಭಾವನೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿದೆ. ಅಲ್ಲದೆ ವಿವಾದಿತ ಫ್ಲಾಟ್ ಮಗನು ಯಾವುದೇ ಕಾನೂನು ಹಕ್ಕನ್ನು ಮಂಡಿಸಬಹುದಾದ ಪೂರ್ವಾರ್ಜಿತ ಆಸ್ತಿಯೂ ಅಲ್ಲ ಎಂದು ನ್ಯಾಯಾಲಯವು ಬೆಟ್ಟು ಮಾಡಿದೆ.

ತನ್ನ ಹೆತ್ತವರು ಫ್ಲಾಟ್ ಅನ್ನು ಪುತ್ರಿಗೆ ಉಡುಗೊರೆಯಾಗಿ ನೀಡಿರುವುದರಿಂದ ಅವರು ಅದರ ಮೇಲೆ ಹಕ್ಕು ಸಾಧಿಸುವಂತಿಲ್ಲ ಎಂಬ ಮಗನ ವಾದವನ್ನು ತಿರಸ್ಕರಿಸಿದ ಉಚ್ಚ ನ್ಯಾಯಾಲಯವು,ಅವರು ಆಸ್ತಿಯಲ್ಲಿ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News