ಸೆ.30ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ವಿತರಣೆ ಬಂದ್ ಸಾಧ್ಯತೆ

Update: 2021-09-19 16:23 GMT

ಮಂಗಳೂರು : ರಾಜ್ಯ ಸರಕಾರವು ಪಡಿತರ ಚೀಟಿದಾರರ ಇ-ಕೆವೈಸಿ ಮಾಡಿಸಲು ಮತ್ತೆ ಗಡುವು ವಿಧಿಸಿದೆ. ಈ ಹಿಂದೆ ಸೆ.10ರೊಳಗೆ ಇ-ಕೆವೈಸಿ ಮಾಡಿಸಲು ಗಡುವು ನೀಡಲಾಗಿತ್ತು. ಇದೀಗ ಸೆಪ್ಟೆಂಬರ್ 30ರವರೆಗೆ ಅವಕಾಶ ಕಲ್ಪಿಸಿದೆ. ಅದರೊಳಗೆ ಮಾಡಿಸದಿದ್ದರೆ ಪಡಿತರ ವಿತರಣೆ ಬಂದ್ ಆಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತೀ ತಿಂಗಳ 10ನೇ ತಾರೀಕಿನ ಬಳಿಕ ಪಡಿತರ ಸಾಮಗ್ರಿಗಳ ವಿತರಣೆ ನಡೆಯಲಿರುವುದರಿಂದ ಇ- ಕೆವೈಸಿ ಮಾಡಲು ಮಧ್ಯಾಹ್ನ 12ರಿಂದ ಸಂಜೆ 4 ಗಂಟೆ ತನಕ ಸಮಯ ನಿಗದಿ ಪಡಿಸಲಾಗಿದೆ. ಹಾಗಾಗಿ ಸಾರ್ವಜನಿಕರು ಈ ನಿಗದಿತ ಅವಧಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ತೆರಳಿ ಇ- ಕೆವೈಸಿ ಮಾಡಿಸಬೇಕಿದೆ. ದ.ಕ.ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಇ-ಕೆವೈಸಿ ಶೇ. 84 ರಷ್ಟು ಪೂರ್ತಿಗೊಂಡಿದೆ. ಆದಾಗ್ಯೂ ಸೆ.30ರೊಳಗೆ ಎಲ್ಲರ ಇ-ಕೆವೈಸಿ ಮಾಡಿ ಮುಗಿಸುವ ಗುರಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಕಿಕೊಂಡಿವೆ.

ಇ-ಕೆವೈಸಿ ಎಂದರೆ ‘ಇಲೆಕ್ಟ್ರಾನಿಕ್- ನ್ಹೊ ಯುವರ್ ಕಸ್ಟಮರ್’ ಎಂದರ್ಥ. ನ್ಯಾಯ ಬೆಲೆ ಅಂಗಡಿದಾರರು ಪಡಿತರ ಚೀಟಿಯಲ್ಲಿ ಹೆಸರು ಇರುವವರನ್ನು ವಿದ್ಯುನ್ಮಾನ ಮೂಲಕ ತಿಳಿಯುವ ವ್ಯವಸ್ಥೆ ಇದಾಗಿದೆ. ಕೇಂದ್ರ ಸರಕಾರವು ‘ಒಂದು ರಾಷ್ಟ್ರ ಒಂದು ರೇಶನ್ ಕಾರ್ಡ್’ ವ್ಯವಸ್ಥೆ ಜಾರಿಗೆ ತಂದಿದ್ದರೂ ಇ- ಕೆವೈಸಿ ಯನ್ನು ಪಡಿತರ ಚೀಟಿದಾರರು ತಮ್ಮ ಮೂಲ ನ್ಯಾಯಬೆಲೆ ಅಂಗಡಿಗೇ ತೆರಳಿ ಮಾಡಿಸುವುದು ಅನಿವಾರ್ಯವಾಗಿದೆ. ಬೇರೆ ಯಾವ ನ್ಯಾಯ ಬೆಲೆ ಅಂಗಡಿಗೆ ತೆರಳಿ ಮಾಡಿಸಲು ಸಾಧ್ಯವಿಲ್ಲ.

ಇ-ಕೆವೈಸಿ ಒಮ್ಮೆ ಮಾಡಿದರೆ ಬ್ಯಾಂಕ್ ಖಾತೆಯ ಮಾದರಿಯಲ್ಲಿ ಅದು ಶಾಶ್ವತವಾಗಿರುತ್ತದೆ. ಬ್ಯಾಂಕಿನಲ್ಲಿ ಖಾತೆ ತೆರೆದ ಶಾಖೆಯಲ್ಲಿಯೇ ಕೆವೈಸಿ ಮಾಡಲಾಗುತ್ತಿದ್ದು, ಅದರಂತೆ ಪಡಿತರ ಚೀಟಿಗೆ ಅದರ ಮೂಲ ನ್ಯಾಯ ಬೆಲೆ ಅಂಗಡಿಯಲ್ಲಿಯೇ ಇ- ಕೆವೈಸಿ ಮಾಡಿಸಬೇಕಿದೆ.

ಅಂತ್ಯೋದಯ, ಬಿಪಿಎಲ್, ಎಪಿಎಲ್ ಸಹಿತ ಎಲ್ಲಾ ಪಡಿತರ ಚೀಟಿದಾರರು ಹಾಗೂ ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲರೂ (ಕುಟುಂಬದ ಸದಸ್ಯರು) ತಮ್ಮ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್, ಅಡುಗೆ ಅನಿಲ (ಗ್ಯಾಸ್) ಸಂಪರ್ಕದ ವಿವರಗಳೊಂದಿಗೆ ಮೂಲ ನ್ಯಾಯ ಬೆಲೆ ಅಂಗಡಿಗೆ ತೆರಳಿ ಬೆರಳಚ್ಚು (ಬಯೋಮೆಟ್ರಿಕ್) ಅಪ್‌ಡೇಟ್ ಮಾಡಿಸಬೇಕು. ಆವಾಗ ಆಧಾರ್ ಸಂಖ್ಯೆಗೆ ನೋಂದಾಯಿಸಿದ ಮೊಬೈಲ್ ಫೋನ್ ಸಂಖ್ಯೆಯನ್ನೇ ಕಡ್ಡಾಯವಾಗಿ ನೀಡಬೇಕು ಮತ್ತು ಮೊಬೈಲ್ ಫೋನ್ ಕೊಂಡೊಯ್ಯಬೇಕು. ಅಪ್‌ಡೇಟ್ ಆಗದಿದ್ದರೆ ಪಡಿತರ ಚೀಟಿಯಲ್ಲಿ ಇ- ಕೆವೈಸಿ ಮಾಡಲು ಸಾಧ್ಯವಿಲ್ಲ. ಅಪ್‌ಡೇಟ್ ಆಗಿಲ್ಲದಿದ್ದರೆ ಆಧಾರ್ ಕೇಂದ್ರಕ್ಕೆ ತೆರಳಿ ಬಯೋಮೆಟ್ರಿಕ್ ಪುನ: ಮಾಡಿಸಬೇಕು. ಆ ಬಳಿಕ ಮತ್ತೆ ನ್ಯಾಯಬೆಲೆ ಅಂಗಡಿಗೆ ತೆರಳಿ ಇ- ಕೆವೈಸಿ ಮಾಡಿಸಬಹುದಾಗಿದೆ.

2019 ಬಳಿಕ ಪಡಿತರ ಚೀಟಿ ಪಡೆದವರು ಹಾಗೂ ಈಗಾಗಲೇ ಇ-ಕೆವೈಸಿ ಮಾಡಿರುವವರು ಪುನ: ಇ-ಕೆವೈಸಿ ಮಾಡುವ ಆವಶ್ಯಕತೆ ಇಲ್ಲ. ಇ-ಕೆವೈಸಿ ಆಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯಲು ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪಡಿತರ ಚೀಟಿ ಸಂಖ್ಯೆ ದಾಖಲಿಸಿ ಮಾಹಿತಿ ಪಡೆಯ ಬಹುದು.

ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಸಾಮಗ್ರಿ ವಿತರಣೆಯನ್ನು ಸರಕಾರ ನಿಲ್ಲಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಚೀಟಿಯಲ್ಲಿರುವ ಸದಸ್ಯರ ಹೆಸರನ್ನು ತೆಗೆದು ಹಾಕಲಾಗುತ್ತದೆಯೇ ಎಂಬುದರ ಬಗ್ಗೆ ಇನ್ನೂ ಅಧಿಕಾರಿಗಳಿಗೆ ಸರಕಾರ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಪಡಿತರ ಚೀಟಿಯನ್ನು ಹಲವು ಉದ್ದೇಶಗಳಿಗೆ ದಾಖಲೆ ಪತ್ರವನ್ನಾಗಿಯೂ ಬಳಸಲಾಗುತ್ತಿದೆ. ಹಾಗಾಗಿ ಇ- ಕೆವೈಸಿ ಮಾಡಿಸದಿದ್ದರೆ ಪಡಿತರ ಚೀಟಿಯಿಂದ ಹೆಸರನ್ನು ಅಳಿಸಿ ಹಾಕಲಾಗುತ್ತದೆಯೇ ಎಂಬ ಆತಂಕವೂ ಸಾರ್ವಜನಿಕರಲ್ಲಿ ಉಂಟಾಗಿದೆ.

ಮೂಲ ನ್ಯಾಯಬೆಲೆ ಅಂಗಡಿಯಲ್ಲಿಯೇ ಇ-ಕೆವೈಸಿ ಮಾಡಿಸಬೇಕಾಗಿರುವುದರಿಂದ ಹೊರ ಊರುಗಳಲ್ಲಿರುವವರು ಇದೀಗ ಇ- ಕೆವೈಸಿ ಮಾಡುವುದಕ್ಕಾಗಿಯೇ ತವರೂರಿಗೆ ಮರಳುವುದು/ತೆರಳುವುದು ಅನಿವಾರ್ಯವಾಗಿದೆ. ಆದರೆ ಇದು ವಲಸಿಗರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಹೊರ ರಾಜ್ಯಗಳಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿ ಪಡಿತರ ಚೀಟಿಯನ್ನು ಇಲ್ಲಿ ಹೊಂದಿದ್ದರೂ ಅದಕ್ಕೆ ಜೋಡಣೆ ಆಗಿರುವ ಆಧಾರ್ ಕಾರ್ಡ್‌ನ್ನು ಈ ಮೊದಲಿದ್ದ ರಾಜ್ಯದಲ್ಲಿ ಮಾಡಿಸಿದ್ದರೆ ಇದೀಗ ಇ- ಕೆವೈಸಿ ಆ ರಾಜ್ಯಕ್ಕೆ ತೆರಳಬೇಕಿದೆ. ಆಧಾರ್ ಕಾರ್ಡ್‌ನ್ನು ಮೊದಲು ಕೇರಳ ಅಥವಾ ಮಹಾರಾಷ್ಟ್ರ ಅಥವಾ ಬೇರೆ ರಾಜ್ಯದಲ್ಲಿ ಮಾಡಿಸಿದ್ದರೆ ಕಾರ್ಡ್‌ನಲ್ಲಿ ವ್ಯಕ್ತಿಯ ಹೆಸರು ಸ್ಥಳೀಯ ಭಾಷೆಯಲ್ಲಿ (ಮಲಯಾಳ/ಮರಾಠಿ ಇತ್ಯಾದಿ) ಇರುತ್ತದೆ. ಹಾಗಾಗಿ ಕರ್ನಾಟಕದಲ್ಲಿ ಇಂತಹ ಪಡಿತರ ಚೀಟಿದಾರರ ಇ- ಕೆವೈಸಿ ಭಾಷೆ ಸಮಸ್ಯೆಯಾಗುತ್ತದೆ. ಅಂತಹವರು ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News