ಬಿಜೆಪಿ, ಕಾಂಗ್ರೆಸ್ ವಿರೋಧಿಗಳನ್ನು ಒಳಗೊಂಡ ತೃತೀಯ ರಂಗ ರಚಿಸಲು ರಾಷ್ಟ್ರೀಯ ಲೋಕ ದಳ ಚಿಂತನೆ

Update: 2021-09-19 18:30 GMT
photo: ANI

ಚಂಡೀಗಡ: ಕೇಂದ್ರ ಸರಕಾರ ಅದರಲ್ಲೂ ಬಿಜೆಪಿ  ವಿರುದ್ದ ತಿರುಗಿಬಿದ್ದಿರುವ ರೈತರ ಆಕ್ರೋಶದ ಲಾಭ ಪಡೆಯಲು ಮುಂದಾಗಿರುವ ಭಾರತೀಯ ರಾಷ್ಟ್ರೀಯ ಲೋಕ ದಳವು (ಐಎನ್ಎಲ್ ಡಿ ) ಬಿಜೆಪಿ ವಿರೋಧಿ ಹಾಗೂ  ಕಾಂಗ್ರೆಸ್ ವಿರೋಧಿಗಳನ್ನು ಒಳಗೊಂಡ ರಾಷ್ಟ್ರೀಯ "ತೃತೀಯ ರಂಗ" ವನ್ನು ರಚಿಸಲು ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿದೆ ಎಂದು The Print ವರದಿ ಮಾಡಿದೆ.

ಐದು ಬಾರಿ ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಓಂ ಪ್ರಕಾಶ್ ಚೌಟಾಲ ಸೆಪ್ಟೆಂಬರ್ 25 ರಂದು ಜಿಂದ್‌ನಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ತೃತೀಯ ರಂಗದ ಕುರಿತು ಕೆಲಸ ಆರಂಭಿಸಲು ಉದ್ದೇಶಿಸಿದ್ದಾರೆ.

ಚೌಟಾಲರ ತಂದೆ ದೇವಿ ಲಾಲ್ ಅವರ ಜನ್ಮ ದಿನದಂದೇ ರ್ಯಾಲಿ ನಡೆಯಲಿದ್ದು ದೇವಿ ಲಾಲ್, 1980 ರ ಉತ್ತರಾರ್ಧದಲ್ಲಿ ಭಾರತದ ಉಪ ಪ್ರಧಾನಿಯಾಗಿದ್ದ ಹರ್ಯಾಣದ ಜಾಟ್ ರೈತ ನಾಯಕನಾಗಿದ್ದಾರೆ.

ಜೆಡಿ (ಎಸ್) ನ ದೇವೇಗೌಡ, ಎಸ್‌ಪಿಯ ಮುಲಾಯಂ ಸಿಂಗ್ ಯಾದವ್, ಎನ್‌ಸಿಯ ಫಾರೂಕ್ ಅಬ್ದುಲ್ಲಾ ಹಾಗೂ  ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಆಹ್ವಾನಿತರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್‌ಎಲ್‌ಡಿಯ ಜಯಂತ್ ಚೌಧರಿ ಹಾಗೂ ಎನ್‌ಸಿಪಿಯ ಶರದ್ ಪವಾರ್ ಸೇರಿದ್ದಾರೆ.

ಈ ತಿಂಗಳ ಆರಂಭದಲ್ಲಿ ದಿಲ್ಲಿಯಲ್ಲಿ ಚೌಟಾಲಾ ಅವರನ್ನು ಭೇಟಿ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನೇಮಕಾತಿ ಹಗರಣದಲ್ಲಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದ ಚೌಟಾಲಾ ಅಂತಿಮವಾಗಿ ಜುಲೈನಲ್ಲಿ ಜೈಲಿನಿಂದ ಬಿಡುಗಡೆಯಾದರು. ಅವರು ರಾಜ್ಯ ಪ್ರವಾಸದ ಜೊತೆಗೆ ಅವರು ಆಹ್ವಾನಿಸಿದ ಅನೇಕ ನಾಯಕರನ್ನು ಭೇಟಿ ಮಾಡಿದ್ದಾರೆ.

ರ‍್ಯಾಲಿಯ ದಿನದಂದು ತೃತೀಯ ರಂಗದ  ಕಲ್ಪನೆಯನ್ನು ಪ್ರಸ್ತಾಪಿಸಲಾಗುವುದು ಹಾಗೂ  ಎಲ್ಲರೂ ಒಪ್ಪಿಕೊಂಡರೆ, ಮುಂದಿನ ಸಭೆಯನ್ನು ಯೋಜಿಸಲಾಗುವುದು ಎಂದು ಐಎನ್‌ಎಲ್‌ಡಿ ಮುಖ್ಯಸ್ಥರಾಗಿರುವ ಓಂ ಪ್ರಕಾಶ್ ಅವರ ಮಗ ಅಭಯ್ ಚೌಟಾಲಾ ಮಂಗಳವಾರ The Print ಗೆ ಹೇಳಿದರು.

"ವಿಶೇಷವಾಗಿ ಒಂಬತ್ತು ತಿಂಗಳಿನಿಂದ ನಡೆಯುತ್ತಿರುವ ರೈತರ ಆಂದೋಲನದ ಹಿನ್ನೆಲೆಯಲ್ಲಿ ದೇಶದಲ್ಲಿ ಒಂದು ನಿರ್ದಿಷ್ಟ ಪರಿಸ್ಥಿತಿ ಉದ್ಭವವಾಗುತ್ತಿದೆ. ಬಿಜೆಪಿ ವಿರೋಧಿ ಪಕ್ಷಗಳು ಒಗ್ಗೂಡಿ ಅವುಗಳನ್ನು ಎದುರಿಸುವ ಸಮಯ ಇದು. ಕಾಂಗ್ರೆಸ್ ಸ್ಥಿತಿಯನ್ನು ಗಮನಿಸಿದರೆ, ಅವರು ಅದನ್ನು ಮಾಡಲು ಸಾಧ್ಯವಿಲ್ಲ. ತಮ್ಮ ಪಕ್ಷವು ಕೃಷಿ ಕಾನೂನುಗಳನ್ನು ಜಾರಿಗೆ ತಂದ ದಿನದಿಂದಲೂ ವಿರೋಧಿಸುತ್ತಿದೆ'' ಎಂದು ಅಭಯ್ ಹೇಳಿದರು.

"ಭಾರತದಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಜನರು ರೈತರು. ಮತ್ತು ಯಾವುದೇ ಪಕ್ಷ ಅಥವಾ ರಾಜಕಾರಣಿ ಅಥವಾ ಸರಿಯಾದ ಚಿಂತನೆ ಮಾಡುವ ವ್ಯಕ್ತಿಗಳು ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದರು.

"ನಾವೆಲ್ಲರೂ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸುತ್ತೇವೆ ಮತ್ತು ಎಲ್ಲರೂ ಒಪ್ಪಿಕೊಂಡರೆ, ಮೂರನೇ ರಂಗ ಘೋಷಿಸುವ ಮೊದಲ ಸಾಮಾನ್ಯ ಕಾರ್ಯಕ್ರಮವೆಂದರೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು ಮತ್ತು ಎಂಎಸ್‌ಪಿಯಲ್ಲಿ ಶಾಸನವನ್ನು ತರುವುದಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News