ದ.ಕ.ಜಿಲ್ಲೆಯಲ್ಲಿ 6, 7ನೆ ಭೌತಿಕ ತರಗತಿಗಳು ಆರಂಭ

Update: 2021-09-20 05:36 GMT

ಮಂಗಳೂರು, ಸೆ.20: ಸುಮಾರು ಆರು ತಿಂಗಳ ಬಳಿಕ ಮತ್ತೆ 6 ಮತ್ತು 7ನೆ ತರಗತಿಯ ವಿದ್ಯಾರ್ಥಿಗಳು ಶಾಲೆಯತ್ತ ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ. ಕೆಲವರು ತಮ್ಮ ಪೋಷಕರೊಂದಿಗೆ ಶಾಲೆಗೆ ಆಗಮಿಸಿದ್ದರೆ, ಶಾಲೆಯಲ್ಲಿಯೂ ಶಿಕ್ಷಕರು ಮಕ್ಕಳನ್ನು ನಗುಮೊಗದಿಂದಲೇ ಸ್ವಾಗತಿಸಿದರು.

ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಾಮೀಟರ್‌ನಲ್ಲಿ ದೈಹಿಕ ಉಷ್ಣಾಂಶ ತಪಾಸಣೆಯೊಂದಿಗೆ ತರಗತಿಯೊಳಗೆ ಪ್ರವೇಶ ನೀಡಲಾಯಿತು. ಮಕ್ಕಳಿಗೆ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದ್ದು, ಮನೆಯಿಂದ ಬಿಸಿ ನೀರು ತರುವಂತೆಯೂ ಈಗಾಗಲೇ ಶಾಲೆಗಳಿಂದ ಸೂಚನೆಯನ್ನು ನೀಡಲಾಗಿದೆ. ಮಾತ್ರವಲ್ಲದೆ, ಶಾಲೆಗಳಲ್ಲಿಯೂ ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ತರಗತಿಗಳಲ್ಲಿಯೂ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಮಕ್ಕಳಿಗೆ ಪಾಠ ಕೇಳಲು ವ್ಯವಸ್ಥೆಯನ್ನು ಶಾಲೆಗಳಲ್ಲಿ ಮಾಡಲಾಗಿದೆ. ಶನಿವಾರದ ವೇಳೆಗೆ ಖಾಸಗಿ, ಅನುದಾನಿತ, ಸರಕಾರಿ ಸೇರಿದಂತೆ ಎಲ್ಲಾ ಶಾಲೆಗಳಲ್ಲಿಯೂ ಆವರಣ ಸ್ವಚ್ಛತೆ, ಶಾಲಾ ಕೊಠಡಿಗಳ ಸ್ವಚ್ಛತೆಯನ್ನು ಮಾಡುವ ಮೂಲಕ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗಿತ್ತು.

6 ಮತ್ತು 7ನೆ ತರಗತಿಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆಯಲಿದ್ದು, ಮಧ್ಯಾಹ್ನದ ಬಳಿಕ 8 ಮತ್ತು 9ನೆ ಭೌತಿಕ ತರಗತಿಗಳು ಈಗಾಗಲೇ ಆರಂಭಗೊಂಡಿವೆ. 10ನೆ ತರಗತಿ ಬೆಳಗ್ಗಿನ ಹೊತ್ತು ನಡೆಯುತ್ತಿದೆ.

‘‘ಕೋವಿಡ್ ಹಿನ್ನೆಲೆಯಲ್ಲಿ 2020ರ ಎಪ್ರಿಲ್ ನಂತರ ಭೌತಿಕ ತರಗತಿಗಳು ಸ್ಥಗಿತಗೊಂಡು ಆನ್‌ಲೈನ್ ಮೂಲಕವೇ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಬಳಿಕ ಸರಕಾರದ ನಿರ್ದೇಶನದ ಮೇರೆಗೆ 2021ರ ಜನವರಿಯಿಂದ ಮಾರ್ಚ್‌ವರೆಗೆ 6 ಮತ್ತು 7ನೆ ತರಗತಿಗೆ ಭೌತಿಕ ತರಗತಿಗಳು ಆರಂಭಗೊಂಡಿದ್ದವು. ಬಳಿಕ ಕೋವಿಡ್ 2ನೆ ಅಲೆಯ ಹಿನ್ನೆಲೆಯಲ್ಲಿ ಮತ್ತೆ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗಿತ್ತು. ಬಹುತೇಕವಾಗಿ ಪೋಷಕರು ಶಾಲೆ ಆರಂಭದ ಬಗ್ಗೆ ಉತ್ಸುಕತೆಯಿಂದ ವಿಚಾರಿಸುತ್ತಿದ್ದರು. ಇಂದು ಶಾಲಾರಂಭ ಮಕ್ಕಳಲ್ಲಿಯೂ ಹೊಸ ಹುರುಪನ್ನು ನೀಡಿದೆ. ಪೋಷಕರು ಕೂಡಾ ಶಾಲೆಯತ್ತ ಮಕ್ಕಳೊಂದಿಗೆ ಸಂತಸದಿಂದಲೇ ಬಂದಿದ್ದಾರೆ. ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಪೋಷಕರಿಗೆ ಈಗಾಗಲೇ ಸೂಚನೆಯನ್ನು ನೀಡಲಾಗಿದ್ದು, ಕಟ್ಟುನಿಟ್ಟಾಗಿ ಅವುಗಳನ್ನು ಪಾಲಿಸಿಕೊಂಡು ತರಗತಿಗಳನ್ನು ಆರಂಭಿಸಲಾಗಿದೆ. ಉತ್ತಮ ಸಂಖ್ಯೆಯ ಹಾಜರಾತಿಯೂ ಪ್ರಾರಂಭದ ದಿನದಲ್ಲೇ ಇದೆ. ’’
- ಸರಿತಾ ಟೈಟಸ್, ಮುಖ್ಯ ಶಿಕ್ಷಕಿ, ಸಂ ಜೋಸೆಫರ ಹಿ.ಪ್ರಾ. ಶಾಲೆ, ಬಜಾಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News