ಮತ ಸೆಳೆಯಲು ಬಿಜೆಪಿ ತಾಲಿಬಾನ್, ಅಪ್ಗಾನಿಸ್ತಾನ್ ಬಗ್ಗೆ ಮಾತನಾಡಲಿದೆ: ಮೆಹಬೂಬಾ ಮುಫ್ತಿ

Update: 2021-09-20 07:55 GMT

ಹೊಸದಿಲ್ಲಿ: "ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗಳು ನಡೆದಾಗ ಬಿಜೆಪಿ ಲಡಾಖ್‍ನಲ್ಲಿ ಅತಿಕ್ರಮಿಸಿರುವ ಚೀನಾ ಕುರಿತು ಮಾತನಾಡುವುದಿಲ್ಲ, ಏಕೆಂದರೆ ಆ ದೇಶದ ಬಗ್ಗೆ ಮಾತನಾಡಿ ಅವರಿಗೆ ಮತಗಳು ದೊರೆಯುವುದಿಲ್ಲ. ಜನರಲ್ಲಿ ಭಯ ಹುಟ್ಟಿಸಬೇಕಿದ್ದರೆ, ತಾಲಿಬಾನ್, ಅಫ್ಗಾನಿಸ್ತಾನ್ ಮತ್ತು ಪಾಕಿಸ್ತಾನ್ ಬಗ್ಗೆ ಮಾತನಾಡಿ ಅಲ್ಲಿ ಇಲ್ಲಿ ಏನಾದರೂ ಮಾಡಿ ಅವರ ಪಕ್ಷ ಮತಗಳನ್ನು ಯಾಚಿಸುತ್ತದೆ" ಎಂದು ಜಮ್ಮುವಿನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಾ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದರು.

ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ಚುನಾವಣೆ ಸ್ಪರ್ಧಿಸುವುದಾಗಿ ಘೋಷಿಸಿದ ಅವರು ತಮ್ಮ ಪಕ್ಷದ ಮಾಜಿ ಮಿತ್ರ ಪಕ್ಷವಾಗಿರುವ ಬಿಜೆಪಿ ಜತೆ ಮತ್ತೆ ಹೊಂದಾಣಿಕೆಯಿಲ್ಲ ಎಂದು ಸ್ಪಷ್ಟಪಡಿಸಿದರು.

"ಹಿಂದುಗಳು ಅಪಾಯದಲ್ಲಿಲ್ಲ, ಬದಲು ಭಾರತ ಮತ್ತು ಅದರ ಪ್ರಜಾಪ್ರಭೂತ್ವ ಬಿಜೆಪಿ ಆಡಳಿತದಲ್ಲಿ ಅಪಾಯದಲ್ಲಿವೆ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆಸಲಾದ ಎಲ್ಲಾ ಒಳ್ಳೆಯ ಕೆಲಸಗಳನ್ನು ಕೇಸರಿ ಪಕ್ಷ ಬುಡಮೇಲುಗೊಳಿಸಿದೆ" ಎಂದು ಅವರು ಹೇಳಿಕೊಂಡರು.

"ಬಿಜೆಪಿಯು ರಾಷ್ಟ್ರೀಯ ಸಂಪನ್ಮೂಲಗಳನ್ನು ಮಾರಾಟ ಮಾಡಿ, ಅಗತ್ಯ ವಸ್ತುಗಳ ಬೆಲೆ ಏರಿಸಿ ತನ್ನ ಖಜಾನೆಯನ್ನು ತುಂಬಿಸಿ ವಿಪಕ್ಷ ಶಾಸಕರುಗಳನ್ನು ಖರೀದಿಸಲು ಮತ್ತು ಬೆದರಿಸಲು ಬಳಸಲಿದೆ" ಎಂದು ಅವರು ಆರೋಪಿಸಿದರು.

ತಾವು ಈ ಹಿಂದೆ ತಾಲಿಬಾನ್ ಉಲ್ಲೇಖಿಸಿದ್ದರಿಂದ ತಾವು "ದೇಶ-ವಿರೋಧಿ" ಆಗಬೇಕಾಯಿತು ಎಂದು ಅವರು ಹೇಳಿದರಲ್ಲದೆ ರೈತರ ಹೋರಾಟ, ಹಣದುಬ್ಬರ ಮತ್ತು ಇತರ ಪ್ರಮುಖ ವಿಚಾರಗಳ ಕುರಿತು ಚರ್ಚೆಯ ಬದಲು ತಮ್ಮ ಹೇಳಿಕೆ ಚರ್ಚೆಗೊಳಗಾಯಿತು ಎಂದರು.

"ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣದಿಂದ ಕೇಂದ್ರ ಪಾಠ ಕಲಿಯಬೇಕಿದೆ, ಜಮ್ಮು ಕಾಶ್ಮೀರದ ಜನರು ತಮ್ಮ ಸಹನೆ ಕಳೆದುಕೊಂಡರೆ ಕೇಂದ್ರಾಡಳಿತ ಪ್ರದೇಶದಲ್ಲಿ ಕೇಂದ್ರ ಸರಕಾರ ನಾಪತ್ತೆಯಾಗಲಿದೆ" ಎಂದು ಕಳೆದ ತಿಂಗಳು ಮೆಹಬೂಬಾ ಹೇಳಿರುವುದು ವಿವಾದಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News