ಬಸ್ರೂರಿನಲ್ಲಿ ಬೃಹತ್ ಶಿಲಾಯುಗದ ನಿಲ್ಸ್‌ಕಲ್ ಪತ್ತೆ

Update: 2021-09-20 14:36 GMT

ಉಡುಪಿ, ಸೆ. 20: ಶತಮಾನಗಳ ಹಿಂದೆ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಪ್ರಖ್ಯಾತ ಚಾರಿತ್ರಿಕ ಬಂದರು ಪಟ್ಟಣವಾಗಿದ್ದ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ, ಬೃಹತ್ ಶಿಲಾಯುಗ ಕಾಲದ ನಿಲ್ಸ್‌ಕಲ್ ಒಂದು ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್‌ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.

ಈಗ ಕುಂದಾಪುರ ತಾಲೂಕಿನ ಪುಟ್ಟ ಗ್ರಾಮವೆನಿಸಿಕೊಂಡಿರುವ ಬಸ್ರೂರು, ಮಧ್ಯಯುಗೀನ ಕರ್ನಾಟಕದ ವಾಣಿಜ್ಯ ಮತ್ತು ಸಾಂಸ್ಕೃತಿಕ ಮಹತ್ವದ ನಗರ ವಾಗಿ ಇಂದಿಗೂ ಜನಪ್ರಿಯವಾಗಿದೆ. ನೂರಾರು ಶಾಸನಗಳು, ದೇವಾಲಯಗಳು ಮತ್ತು ದೈವಸ್ಥಾನಗಳ ನೆಲೆವೀಡು ಇದಾಗಿದೆ.

ಬಸ್ರೂರಿನಲ್ಲಿರುವ ನೂರಾರು ಪುರಾತನ ದೇವಸ್ಥಾನ, ದೈವಸ್ಥಾನ, ಗರಡಿ, ಜೈನ ಬಸದಿಗಳಲ್ಲಿ ಊರಿನ ಪ್ರಮುಖ ಮಹಾಲಿಂಗೇಶ್ವರ ದೇವಸ್ಥಾನ, ರಾಮಚಂದ್ರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಕೋಟೆ ಆಂಜನೇಯ ದೇವಸ್ಥಾನ, ತುಳುವೇಶ್ವರ ದೇವಸ್ಥಾನ, ದೇವಿ ದೇವಸ್ಥಾನ, ಉಮಾಮಹೇಶ್ವರಿ ದೇವಸ್ಥಾನ, ಬೈರವಿ ದೈವಸ್ಥಾನ, ಗರಡಿ, ಸದಾನಂದ ಮಠ ಮುಂತಾದವುಗಳು ಈಗಲೂ ಹಿಂದಿನ ವೈಭವಗಳನ್ನು ಸಾರುತ್ತಿವೆ.

ಇಲ್ಲಿನ ಮಾರಿಹಬ್ಬ ಅಥವಾ ದೇವಿಹಬ್ಬ ದಕ್ಷಿಣ ಭಾರತದ ಜನಪ್ರಿಯ ಶಾಕ್ತ ಸಂಪ್ರದಾಯದ ಆಚರಣೆ. ದಕ್ಷಿಣ ಭಾರತದ ಎಲ್ಲಡೆ ವರ್ಷಕ್ಕೊಮ್ಮೆ, ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಈ ಹಬ್ಬ ಜನಪದರ ಹಬ್ಬವಾಗಿ ವೈಭವದಿಂದ ಆಚರಿಸಲ್ಪಡುತ್ತಿದೆ. ಆದರೆ, ಇಡೀ ದೇಶದಲ್ಲಿಯೇ 60 ವರ್ಷಗಳಿಗೆ ಒಮ್ಮೆ ಮಾತ್ರ ಆಚರಿಸಲ್ಪಡುವ ದೇವಿ ಹಬ್ಬ ಅಥವಾ ಮಾರಿ ಹಬ್ಬ ನಡೆಯುವುದು ಬಸ್ರೂರಿನಲ್ಲಿ ಮಾತ್ರ. ಇಂತಹ ಹತ್ತು ಹಲವು ವೈಶಿಷ್ಯಗಳ ತವರೂರಾದ ಬಸ್ರೂರಿನಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್‌ಕಲ್ ಪತ್ತೆಯಾಗಿದೆ ಎಂದು ಪ್ರೊ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿಯ ವಿಶಿಷ್ಟ ನಿಲ್ಸ್‌ಕಲ್: ಉಡುಪಿ ಜಿಲ್ಲೆಯ ಸುಭಾಷ್ ನಗರ, ಅಡ್ಕದಕಟ್ಟೆ ಮತ್ತು ಕೊಲ್ಲೂರುಗಳಲ್ಲಿ ಈಗಾಗಲೇ ನಿಲ್ಸ್‌ಕಲ್‌ಗಳು ಪತ್ತೆಯಾಗಿವೆ. ಆದರೆ, ಬಸ್ರೂರಿನ ನಿಲ್ಸ್‌ಕಲ್ ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಕಣ್ಮನ ಸೆಳೆಯುತ್ತದೆ. ಗರ್ಭಿಣಿ ಸ್ತ್ರೀಯ ದೇಹದ ಬಾಗು-ಬಳುಕುಗಳಂತೆ ಈ ನಿಲ್ಸ್‌ಕಲ್‌ನ್ನು ವಿನ್ಯಾಸಗೊಳಿಸಲಾಗಿದೆ. ಕರಾವಳಿಯ ನಿಲ್ಸ್‌ಕಲ್‌ಗಳನ್ನು ಸ್ಥಳೀಯ ದಂಥಕತೆಗಳಲ್ಲಿ ಗರ್ಭಿಣಿ ಕಲ್ಲುಗಳೆಂದೇ ಕರೆಯಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಪುರಾತತ್ವ ಆಧಾರಗಳು ಲಭ್ಯವಿಲ್ಲ ಎಂದವರು ಹೇಳುತ್ತಾರೆ.

ನಿಲ್ಸ್‌ಕಲ್ ಎಂದರೆ ಏನು?

ಬಸ್ರೂರಿನ ನಿಲ್ಸ್‌ಕಲ್ ಸುಮಾರು ಏಳು ಅಡಿ ಎತ್ತರವಿದೆ. ವಾಯುವ್ಯ ದಿಕ್ಕಿಗೆ ಮುಖ ಮಾಡಿ ನಿಂತಿರುವ ಈ ಕಲ್ಲು, ಪೂರ್ವಕ್ಕೆ ಸ್ವಲ್ಪ ವಾಲಿದಂತೆ ನಿಲ್ಲಿಸಲ್ಪಟ್ಟಿದೆ. ಬಸ್ರೂರನ್ನು ಶಾಸನಗಳಲ್ಲಿ ಬಸುರೆಪಟ್ಟಣ, ಬಸುರೆನಗರ, ಬಸ್ರೂರು, ವಸುಪುರ ಎಂದು ಕರೆಯಲಾಗಿದೆ. ಕನ್ನಡ ಭಾಷೆಯಲ್ಲಿ ಬಸಿರು, ಬಸುರೆ ಎಂದರೆ ಗರ್ಭಿಣಿ ಎಂದೇ ಅರ್ಥವಿದೆ. ವಸುಪುರ ಎಂಬ ಸಂಸ್ಕೃತ ಪದದಲ್ಲಿನ ವಸು ಎಂಬ ಅರ್ಥವೂ ಭೂಮಿ ಎಂದೇ ಆಗಿದೆ.

ಭೂಮಿ ಅಂದರೆ ಹೆಣ್ಣೆ ತಾನೇ? ಆದ್ದರಿಂದ ಬಸ್ರೂರಿನ ನಿಲ್ಸ್‌ಕಲ್‌ಗೂ ಹೆಣ್ಣಿಗೂ ನಿಕಟ ಸಂಬಂಧವಿದೆ. ಬಸ್ರೂರಿನ ಈ ವಿಶಿಷ್ಟ ನಿಲ್ಸ್‌ಕಲ್ ಸಂಶೋಧನೆ, ಬಸ್ರೂರಿನ ಪ್ರಾಚೀನತೆಯನ್ನು ಕನಿಷ್ಠ ಕ್ರಿ.ಪೂ. 1000 ವರ್ಷಗಳ ಪ್ರಾಚೀನತೆಗೆ ತೆಗೆದುಕೊಂಡು ಹೋಗುತ್ತದೆ. ಈ ನಿಲ್ಸ್‌ಕಲ್ಲು ಬಸ್ರೂರಿನ ವೆಂಕಟರಮಣ ದೇವಾಲಯ ಮತ್ತು ಕೋಟೆ ಆಂಜನೇಯ ದೇವಾಲಯಗಳ ನಡುವಿನಲ್ಲಿದೆ. ಇದು ಶಿವಮೊಗ್ಗ ಜಿಲ್ಲೆಯ ಬೈಸೆಯ ನಿಲ್ಸ್‌ಕಲ್‌ನ್ನು ಹೋಲುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕಲ್ಲಿನ ಬಗ್ಗೆ ಗಮನ ಸೆಳೆದ ಮುರುಳೀಧರ ಹೆಗಡೆ ಅವರೊಂದಿಗೆ ಬಸ್ರೂರಿನ ಪ್ರದೀಪ್, ವಿದ್ಯಾರ್ಥಿಗಳಾದ ಶ್ರೇಯಸ್, ನಾಗರಾಜ್, ಗೌತಮ್, ಚಂದ್ರು ಮತ್ತು ಕಾರ್ತಿಕ್ ಹಾಗೂ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿಯವರು ನಿಲ್ಸ್‌ಕಲ್ ಅಧ್ಯಯನದಲ್ಲಿ ಸಹಕರಿಸಿದ್ದಾರೆ ಎಂದು ಪ್ರೊ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News