ರಶ್ಯ ವಿವಿಯಲ್ಲಿ ಗುಂಡಿನ ದಾಳಿ: ಕನಿಷ್ಟ 8 ಮಂದಿ ಮೃತ್ಯು

Update: 2021-09-20 15:46 GMT

ಮಾಸ್ಕೊ, ಸೆ.20: ರಶ್ಯದ ಪೆರ್ಮ್ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಯೊಬ್ಬ ಏಕಾಏಕಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ 8 ಮಂದಿ ಮೃತಪಟ್ಟಿದ್ದು 6 ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಮಿತಿ ಹೇಳಿದೆ. ಶಂಕಿತ ಆರೋಪಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು ಈತನನ್ನು ಕೃತ್ಯ ನಡೆಸಿದ ಕೆಲ ಘಂಟೆಗಳಲ್ಲೇ ಬಂಧಿಸಲಾಗಿದೆ. ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆಯೇ ವಿವಿಯ ಪ್ರಥಮ ಮಹಡಿಯಲ್ಲಿದ್ದ ಕೆಲ ವಿದ್ಯಾರ್ಥಿಗಳು ಕೆಳಗೆ ಹಾರಿದಾಗ ನೆಲದ ಮೇಲೆ ಬಿದ್ದು ಗಾಯಗೊಂಡರು. ತರಗತಿಯ ಕಿಟಕಿಯಿಂದ ಕೆಲ ವಿದ್ಯಾರ್ಥಿಗಳು ಕೆಳಗೆ ಹಾರುತ್ತಿರುವ ವೀಡಿಯೊವನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ.

 ಕೆಲವು ವಿದ್ಯಾರ್ಥಿಗಳು ಕ್ಲಾಸ್ರೂಂನ ಬಾಗಿಲಿಗೆ ಖುರ್ಚಿಗಳನ್ನು ಅಡ್ಡ ಇಟ್ಟು ದುಷ್ಕರ್ಮಿ ಒಳಪ್ರವೇಶಿಸಿದಂತೆ ತಡೆದರು. ಇನ್ನು ಕೆಲವು ವಿದ್ಯಾರ್ಥಿಗಳು ತರಗತಿ ಕೊಠಡಿಯೊಳಗೆ ನುಗ್ಗಿ ಬಾಗಿಲು ಹಾಕಿಕೊಂಡರು. ಗುಂಡಿನ ದಾಳಿಯಲ್ಲಿ ಕನಿಷ್ಟ 14 ಮಂದಿ ಗಾಯಗೊಂಡಿರುವುದಾಗಿ ಪೆರ್ಮ್ ವಲಯದ ಆರೋಗ್ಯ ಇಲಾಖೆ ಹೇಳಿದೆ. ರಶ್ಯದಲ್ಲಿ ಬಂದೂಕು ಹೊಂದಲು ಕಠಿಣ ನಿಯಮ ಜಾರಿಯಲ್ಲಿರುವುದರಿಂದ ಶಾಲೆ ಮತ್ತು ವಿವಿಗಳಲ್ಲಿ ಗುಂಡಿನ ದಾಳಿಯ ಪ್ರಕರಣ ಅಪರೂಪವಾಗಿದೆ. ಈ ವರ್ಷದ ಮೇ 11ರಂದು ಕಝನ್ ನಗರದ ಶಾಲೆಯೊಂದರ ವಿದ್ಯಾರ್ಥಿ ನಡೆಸಿದ ಗುಂಡಿನ ದಾಳಿಯಲ್ಲಿ 7 ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿಗಳು ಹತರಾದ ಬಳಿಕ ಬಂದೂಕು ಪರವಾನಿಗೆ ನಿಯಮವನ್ನು ಅಧ್ಯಕ್ಷ ಪುಟಿನ್ ಬಿಗಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News