‘ಗಾಂಧೀಜಿ-ರಾಖಿ ಸಾವಂತ್’ ಹೇಳಿಕೆ: ವಿವಾದದ ಕಿಡಿ ಹೊತ್ತಿಸಿ, ಕ್ಷಮೆಯಾಚಿಸಿದ ಉತ್ತರಪ್ರದೇಶ ಸ್ಪೀಕರ್ !

Update: 2021-09-20 16:22 GMT
photo: twitter.com/mantralayatimes

ಲಕ್ನೋ , ಸೆ.20: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ತಾನು ನೀಡಿದ್ದ ಹೇಳಿಕೆಯು ವಿವಾದ ಕಿಡಿ ಹೊತ್ತಿಸಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಸೆಂಬ್ಲಿ ಸ್ಪೀಕರ್ ಹೃದಯ್ ನಾರಾಯಣ್ ದೀಕ್ಷಿತ್ ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ. ತಾನು ಗಾಂಧೀಜಿ ಬಗ್ಗೆ ನೀಡಿದ ಹೇಳಿಕೆಯು ಅಪ್ರಾಸಂಗಿಕವಾದುದೆಂದು ಅವರು ತಿಳಿಸಿದ್ದಾರೆ.

ಉನ್ನಾವೊದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ದೀಕ್ಷಿತ್ ಅವರು ‘‘ಗಾಂಧೀಜಿಯವರು ಕೆಲವೇ ಉಡುಪುಗಳನ್ನು ಧರಿಸುತ್ತಿದ್ದರು. ಅವರು ಧೋತಿಯನ್ನು ಮಾತ್ರವೇ ಉಡುತ್ತಿದ್ದರು.  ಅವರನ್ನು ಬಾಪು ಎಂದು ಕರೆಯಲಾಗುತ್ತಿತ್ತು. ಒಂದು ವೇಳೆ ಕೇವಲ ತಮ್ಮ ಬಟ್ಟೆಗಳನ್ನು ಕಳಚುವುದರಿಂದ ಜನರು ಮಹಾನ್ ವ್ಯಕ್ತಿಗಳಾಗುವುದಾದರೆ, ರಾಖಿ ಸಾವಂತ್ (ಟಿವಿ ರಿಯಾಲಿಟಿ ಶೋ ತಾರೆ) ಕೂಡಾ ಗಾಂಧೀಜಿಗಿಂತ ಮಹಾನ್ ವ್ಯಕ್ತಿಯಾಗಬಹುದಿತ್ತು’’ ಎಂದು ಹೇಳಿದ್ದರು.
    
ಉನ್ನಾವೊದ ಭಗವಂತನಗರ ಕ್ಷೇತ್ರದ ಶಾಸಕರಾದ ದೀಕ್ಷಿತ್ ಅವರು ಪ್ರಬುದ್ಧ ಜನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಉತ್ತರಪ್ರದೇಶದಾದ್ಯಂತ ಸಮಾವೇಶಗಳನ್ನು ಈ ಸರಣಿ ಸಮಾವೇಶಗಳನ್ನು ನಡೆಸುತ್ತಿದೆ.
  
ದೀಕ್ಷಿತ್ ಅವರ ವಿವಾದಾತ್ಮಕ ಭಾಷಣವು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷಗಳು ದೀಕ್ಷಿತ್ ವಿರುದ್ಧ ವಾಗ್ದಾಳಿ ಡೆಸಿದವು. ಉತ್ತರಪ್ರದೇಶದ ವಿಧಾನಸಭಾ ಸ್ಪೀಕರ್ ಅವರ ಹೇಳಿಕೆಯು ಗಾಂಧಿ ಹಾಗೂ ಮಹಿಳೆಯರಿಗೆ ಎಸಗಿದ ಅಪಮಾನವಾಗಿದೆ ಎಂದು ಅವು ಆಕ್ರೋಶ ವ್ಯಕ್ತಪಡಿಸಿವೆ.

ಆದಾಗ್ಯೂ ಸೋಮವಾರ ಟ್ವಿಟ್ಟರ್ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ದೀಕ್ಷಿತ್ ಅವರು, ತಾನು ಹೇಳಿಕೆಯು ಅಪ್ರಾಸಂಗಿಕವಾದುದೆಂದು ತಿಳಿಸಿದರು. ವೈರಲ್ ಆಗಿರುವ ವಿಡಿಯೋ ಕ್ಲಿಪ್ನಲ್ಲಿ ತನ್ನ ಭಾಷಣದ ಒಂದು ಭಾಗವನ್ನಷ್ಟೇ ತೋರಿಸಲಾಗಿದೆ ಎಂದರು.


ಪಕ್ಷದ ಕಾರ್ಯಕ್ರಮದಲ್ಲಿ ತನ್ನನ್ನು ಚಿಂತಕ ಬರಹಗಾರನೆಂದು ಪರಿಚಯಿಸಲಾಗಿತ್ತು. ಆದರೆ ಅದನ್ನು ತಾನು ಒಪ್ಪುವುದಿಲ್ಲವೆಂದು ಭಾಷಣದಲ್ಲಿ ಹೇಳಿದಾಗ ತಾನು ಆಡಿದ ಈ ಮಾತನ್ನು ವಿವಾದಕ್ಕೀಡು ಮಾಡಲಾಗಿದೆಯೆಂದು ಅವರು ತಿಳಿಸಿದರು.
 
‘‘ಕೆಲವು ಪುಸ್ತಕಗಳು ಹಾಗೂ ಲೇಖನಗಳನ್ನು ಬರೆದ ಮಾತ್ರಕ್ಕೆ ಓರ್ವ ಚಿಂತಕನಾಗಲಾರ. ಅದೇ ರೀತಿ, ಮಹಾತ್ಮಾಗಾಂಧೀಜಿಯವರು ಕೆಲವೇ ಬಟ್ಟೆಗಳನ್ನು ಧರಿಸುತ್ತಿದ್ದರು. ಅವರನ್ನು ದೇಶವು ಬಾಪುವೆಂದು ಗೌರವಿಸುತ್ತದೆ. ಹಾಗೆಂದ ಮಾತ್ರಕ್ಕೆ ರಾಖಿ ಸಾವಂತ್ ಕೂಡಾ ಗಾಂಧಿಯಾಗಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾಗಿ ದೀಕ್ಷಿತ್ ಸ್ಪಷ್ಟೀಕರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News