ಇನ್ನೂ ಕಾರ್ಯಗತಗೊಳ್ಳದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು

Update: 2021-09-20 17:15 GMT

‌ಹೊಸದಿಲ್ಲಿ,ಸೆ.19: ಒಟ್ಟು 68 ಮಂದಿ ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯವಾದಿಗಳನ್ನು ವಿವಿಧ ಹೈಕೋರ್ಟ್ ಗಳ ನ್ಯಾಯಾಧೀಶರಾಗಿ ನೇಮಕಗೊಳಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಾಡಿರುವ ಶಿಫಾರಸುಗಳ ಬಗ್ಗೆ ಕೇಂದ್ರ ಸರಕಾರವು ಇನ್ನೂ ಕೂಡಾ ಕಾರ್ಯಗತಗೊಳಿಸಿಲ್ಲವೆಂದು ಎಂದು ಉನ್ನತ ಮೂಲಗಳು ತಿಳಿಸಿವೆ.
 
ಈ ವರ್ಷದ ಆಗಸ್ಟ್ 8 ಹಾಗೂ ಸೆಪ್ಟೆಂಬರ್ 1ರ ನಡುವೆ, ವಿವಿಧ ಹೈಕೋರ್ಟ್ ಗಳು ಶಿಫಾರಸು ಮಾಡಿರುವ 100ಕ್ಕೂ ಅಧಿಕ ಹೆಸರುಗಳನ್ನು ಸುಪ್ರೀಂಕೋರ್ಟ್ ನ ಕೊಲಿಜಿಯಂ ಪರಿಷ್ಕರಿಸಿದ್ದು, ಅಂತಿಮವಾಗಿ 12 ಹೈಕೋರ್ಟ್ ಗಳ ನ್ಯಾಯಾಧೀಶರಾಗಿ ನೇಮಕಗೊಳಿಸಲು 68 ಮಂದಿಯ ಹೆಸರುಗಳನ್ನು ಕಳುಹಿಸಿಕೊಟ್ಟಿದೆ.
 
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಶಿಫಾರಸು ಮಾಡಿರುವ ಹೆಸರುಗಳ ಬಗ್ಗೆ ಕೇಂದ್ರ ಸರಕಾರವು ಇನ್ನಷ್ಟೇ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆಯೆಂದು ಮೂಲಗಳು ತಿಳಿಸಿವೆ.
 
ಈ 68 ಹೆಸರುಗಳ ಪೈಕಿ ಕರ್ನಾಟಕದ ಇಬ್ಬರು ಹಾಗೂ ಜಮ್ಮುಕಾಶ್ಮೀರದ ಒಬ್ಬರ ಹೆಸರುಗಳನ್ನು ಮೂರನೆ ಬಾರಿಗೆ ಹಾಗೂ ಇತರ 10 ಮಂದಿಯ ಹೆಸರುಗಳನ್ನು ಎರಡನೆ ಬಾರಿಗೆ ಶಿಪಾರಸು ಮಾಡಿದೆ. ಉಳಿದವರೆಲ್ಲರೂ ಹೊಸತಾಗಿ ಶಿಫಾರಸು ಮಾಡಲ್ಪಟ್ಟವರಾಗಿದ್ದಾರೆ.
 
ಈ ಶಿಫಾರಸುಗಳಿಗೆ ಪೂರ್ವಭಾವಿಯಾಗಿ ಆಗಸ್ಟ್ 17ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಕೈಗೊಂಡ ಐತಿಹಾಸಿಕ ನಿರ್ಧಾರವೊಂದರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಭಡ್ತಿಗೊಳಿಸಲು ಮೂವರು ಮಹಿಳೆಯರು ಸೇರಿದಂತೆ 9 ಮಂದಿಯ ಹೆಸರುಗಳನ್ನು ಕಳುಹಿಸಿಕೊಟ್ಟಿತ್ತು.
  
ಈ ಎಲ್ಲ ಹೆಸರುಗಳಿಗೆ ಕೇಂದ್ರ ಸರಕಾರವು ತ್ವರಿತವಾಗಿ ತನ್ನ ಅನುಮೋದನೆ ನೀಡಿತು. ಆಗಸ್ಟ್ 31ರಂದು ಇವರೆಲ್ಲರೂ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
  
ಶುಕ್ರವಾರದಂದು ಕೋಲ್ಕತಾ ಹೈಕೋರ್ಟ್ ನ ಪ್ರಭಾರ ಮುಖ್ಯ ನ್ಯಾಯಾಧೀಶ ರಾಜೇಶ್ ಬಿಂದಾಲ್ ಸೇರಿದಂತೆ ಎಂಟು ಮಂದಿಯ ಹೆಸರುಗಳನ್ನು ಸುಪ್ರೀಂಕೋರ್ಟ್ನ ವಿವಿಧ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಾಗಿ ಭಡ್ತಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News