ಚೇತರಿಕೆಗೆ ತಡಕಾಡುತ್ತಿದೆ ಜವಳಿ ರೆಡಿಮೇಡ್ ವ್ಯಾಪಾರ

Update: 2021-09-21 07:10 GMT

ಮಂಗಳೂರು, ಸೆ.21: ಸಮಾಜದಲ್ಲಿ ನಾಗರಿಕರಾಗಿ ಬದುಕಲು ತಲೆಯ ಮೇಲೊಂದು ಸೂರು, ಹೊಟ್ಟೆಗೆ ಆಹಾರ ಹಾಗೂ ಮೈ ಮುಚ್ಚಿಕೊಳ್ಳಲು ಬಟ್ಟೆ ಅತೀ ಅಗತ್ಯವಾಗಿದೆ. ಆದರೆ ಕೊರೋನ ಲಾಕ್‌ಡೌನ್ ಈ ಅಗತ್ಯ ವಸ್ತುಗಳಲ್ಲಿ ಒಂದಾದ ಜವಳಿ ಉದ್ಯಮದ ಮೇಲೆ ಭಾರೀ ಹೊಡೆತವನ್ನು ನೀಡಿದೆ. ಕೊರೋನ 1 ಮತ್ತು 2ನೇ ಅಲೆಯ ಸಂದರ್ಭ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿ, ದಿನಬಳಕೆಯ ಸಾಮಗ್ರಿಗಳ ಖರೀದಿಗೆ ನಿಗದಿತ ಸಮಯದಲ್ಲಿ ಅವಕಾಶ ಇತ್ತಾದರೂ, ಜವಳಿ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಇದರಿಂದಾಗಿ ಲಾಕ್‌ಡೌನ್ ಸಂದರ್ಭ ಮೃತಪಟ್ಟವರ ಪಾರ್ಥಿವ ಶರೀರಕ್ಕೆ ಹಾಕುವ ಬಟ್ಟೆಗಾಗಿ, ಹುಟ್ಟಿದ ಹೊಸ ಕಂದಮ್ಮಗೆ ಹೊಸ ಬಟ್ಟೆ ಕೊಂಡುಕೊಳ್ಳಲು ಜನಸಾಮಾನ್ಯರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ದ.ಕ. ಜಿಲ್ಲೆಯೊಂದರಲ್ಲೇ ಸಣ್ಣ ರೆಡಿ ಮೇಡ್ ಅಂಗಡಿಯಿಂದ ಹಿಡಿದು ಬೃಹತ್ ಜವಳಿ ಮಳಿಗೆಯನ್ನು ಒಳ ಗೊಂಡಂತೆ ಸಾವಿರಕ್ಕೂ ಅಧಿಕ ರೆಡಿ ಮೇಡ್ ಜವಳಿ ಅಂಗಡಿಗಳಿವೆ. ಇಲ್ಲಿ ಅತೀ ಕನಿಷ್ಠವೆಂದರೂ ಬಟ್ಟೆ ಅಂಗಡಿ ಅಥವಾ ಮಳಿಗೆಯಲ್ಲಿ ಕನಿಷ್ಠ 3ರಿಂದ 100ರಷ್ಟು ಸಿಬ್ಬಂದಿ (ಸೇಲ್ಸ್‌ಗರ್ಲ್- ಸೇಲ್ಸ್ ಮೆನ್ ಸೇರಿ)ಯನ್ನು ಒಳಗೊಂಡು ಇದರಿಂದಲೇ ತಮ್ಮ ಕುಟುಂಬವನ್ನು ಪಾಲನೆ ಮಾಡಿಕೊಂಡು ಬರುವವರಿದ್ದಾರೆ. ಬಟ್ಟೆ ವ್ಯಾಪಾರ ಉದ್ಯಮವನ್ನೇ ಅವಲಂಬಿಸಿರುವ 5,000ಕ್ಕೂ ಅಧಿಕ ಮಂದಿ ಹಾಗೂ ಅವರ ಅವಲಂಬಿತರು. ಲಾಕ್‌ಡೌನ್ ಈ ಕುಟುಂಬಗಳ ಮೇಲೆ ಭಾರೀ ಹೊಡೆತ ನೀಡಿದೆ. ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಹತೆಯೊಂದಿಗೆ ದುಡಿಯುವ ಸಾವಿರಾರು ಕೈಗಳು ಕಳೆದ ಸುಮಾರು ಎರಡು ವರ್ಷಗಳಿಂದೀಚೆಗೆ ಸರಿಯಾದ ವೇತನವಿಲ್ಲದೆ, ಕೆಲಸವಿಲ್ಲದೆ ಕಂಗಾಲಾಗಿದ್ದರೆ, ಸಾಲ ಮಾಡಿ ಜವಳಿ ರೆಡಿಮೇಡ್ ವ್ಯಾಪಾರವನ್ನೇ ನಂಬಿದವರ ಪಾಡು ಕೇಳುವರಿಲ್ಲವಾಗಿದೆ. ಅದೆಷ್ಟೋ ವ್ಯಾಪಾರಿಗಳು ಬ್ಯಾಂಕ್ ಸಾಲ ಮಾಡಿ ತಮ್ಮ ಅಂಗಡಿಯಲ್ಲಿ ಹಾಕಿದ್ದ ಬಟ್ಟೆಬರೆಗಳು ವ್ಯಾಪಾರವಾಗದೆ, ಧೂಳು ಹಿಡಿದು, ಅವುಗಳನ್ನು ಹಿಂದಿರುಗಿಸಲೂ ಆಗದೆ, ವ್ಯಾಪಾರ ಮಾಡಲೂ ಆಗದೆ, ಮತ್ತೆ ಸಾಲಪಡೆಯಲಾಗದೆ ತತ್ತರಿಸುತ್ತಿದ್ದಾರೆ.

ಲಾಕ್‌ಡೌನ್ ಜೊತೆಗೆ ವೀಕೆಂಡ್ ಕರ್ಫ್ಯೂ ಬರೆ: ಸರಾಸರಿ ವ್ಯಾಪಾರವನ್ನು ಹೊರತುಪಡಿಸಿ ಮದುವೆ ಸೀಸನ್, ಹಬ್ಬ ಹರಿದಿನಗಳೇ ಬಟ್ಟೆ ಬರೆ ವ್ಯಾಪಾರಸ್ಥರ ಆದಾಯದ ಪ್ರಮುಖ ಮೂಲ. ಆದರೆ ಕೊರೋನ ಪ್ರಥಮ ಅಲೆಯ ಲಾಕ್‌ಡೌನ್ ಸಂದರ್ಭ ಐದಾರು ತಿಂಗಳು ಈ ರೆಡಿಮೇಡ್ ಅಂಗಡಿಗಳು ಬಾಗಿಲು ಹಾಕಿದ್ದವು. ಇದರಿಂದ ದ.ಕ. ಜಿಲ್ಲೆಯೊಂದರಲ್ಲೇ ಸಾವಿರಾರು ಕೋಟಿ ರೂ. ವ್ಯಾಪಾರ ನಷ್ಟವಾಗಿದೆ. ಆ ಬಳಿಕ ನಿಧಾನಗತಿಯಲ್ಲಿ ಅನ್‌ಲಾಕ್ ಆದರೂ ಬಟ್ಟೆಬರೆ ವ್ಯಾಪಾರ ಚೇತರಿಕೆ ಕಾಣಲೇ ಇಲ್ಲ. ಇದಾಗಿ ನಾಲ್ಕೈದು ತಿಂಗಳಲ್ಲೇ ಕೊರೋನ ಎರಡನೆ ಅಲೆ ಲಾಕ್‌ಡೌನ್ ಬಟ್ಟೆ ಬರೆ ಅಂಗಡಿಗಳವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿತ್ತು. ಬಳಿಕ ಕಳೆದ ಮೇ ತಿಂಗಳ ಅಂತ್ಯದಿಂದ ಬಹುತೇಕ ಕ್ಷೇತ್ರಗಳು ನಿಧಾನಗತಿಯಲ್ಲಿ ಆರಂಭಗೊಂಡರೂ ಬಟ್ಟೆಬರೆ, ಫ್ಯಾನ್ಸಿ ಹಾಗೂ ಪಾದರಕ್ಷೆ ವ್ಯಾಪಾರ ಅಂಗಡಿಗಳು ಬಾಗಿಲು ತೆರೆಯಲು ಮತ್ತೆ ಕೆಲ ಸಮಯವೇ ಕಳೆಯಿತು. ದ.ಕ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದ ಕಾರಣ ಮುಂದುವರಿದ ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಬಟ್ಟೆಬರೆ ವ್ಯಾಪಾರಸ್ಥರು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕುವಂತಾಗಿತ್ತು. ಇದೀಗ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಅನ್‌ಲಾಕ್ ಆಗಿದ್ದರೂ ಜವಳಿ ಅಂಗಡಿಗಳಲ್ಲಿ ವ್ಯಾಪಾರ ಇನ್ನೂ ಚೇತರಿಕೆಯಾಗಿಲ್ಲ ಎಂಬ ಕೊರಗು ವ್ಯಾಪಾರಿಗಳಿಂದ ಕೇಳಿ ಬರುತ್ತಿದೆ.

ಉದ್ಯೋಗ ಕಡಿತ, ಆದಾಯ ನಷ್ಟ: ಜಿಲ್ಲೆಯ ಬಹುತೇಕ ಜವಳಿ ಅಂಗಡಿಗಳವರು ಆರ್ಥಿಕ ಸಂಕಷ್ಟದ ನಡುವೆಯೂ ತಮ್ಮ ಸಿಬ್ಬಂದಿಗೆ ಮಾಸಿಕ ಸಂಪೂರ್ಣ ಅಥವಾ ಅರ್ಧ ವೇತನದ ಮೂಲಕ ಅವರ ಕುಟುಂಬಕ್ಕೆ ಲಾಕ್‌ಡೌನ್ ಸಂದರ್ಭ ಬೆಂಬಲವಾಗಿ ನಿಂತಿದ್ದರು. ಕನಿಷ್ಠ ವೇತನ ಪಡೆಯುತ್ತಿದ್ದ ಬಹುತೇಕ ಸಿಬ್ಬಂದಿ ಅನಿವಾರ್ಯವಾಗಿ ಪರ್ಯಾಯ ಉದ್ಯೋಗದತ್ತ ಮುಖ ಮಾಡಿದ್ದರೆ, ಜವಳಿ ಅಂಗಡಿಯವರು ವ್ಯಾಪಾರ ನಷ್ಟದ ಹಿನ್ನೆಲೆಯಲ್ಲಿ ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಿರುವುದರಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

"ನಮಗೆ ವ್ಯಾಪಾರ ಆಗುವುದೇ ದೀಪಾವಳಿ, ಕ್ರಿಸ್‌ಮಸ್, ರಮಝಾನ್ ಹಾಗೂ ಮದುವೆ ಸೀಸನ್‌ಗಳಲ್ಲಿ. ಆದರೆ ಕೊರೋನ ಲಾಕ್‌ಡೌನಿಂದಾಗಿ ಕಳೆದ ಸುಮಾರು ಒಂದೂವರೆ ವರ್ಷದಿಂದ ಜವಳಿ ರೆಡಿಮೇಡ್ ಉದ್ಯಮ ನೆಲಕಚ್ಚಿದೆ. ಪ್ರಸಕ್ತ ಕೊರೋನ ಎರಡನೇ ಅಲೆಯ ಬಳಿಕ ಅನ್‌ಲಾಕ್ ಆಗಿದ್ದರೂ ನಮ್ಮ ಕ್ಷೇತ್ರ ಚೇತರಿಕೆಗಾಗಿ ಹೆಣಗಾಡುತ್ತಿದೆ. ಬ್ಯಾಂಕ್ ಸಾಲ ಪಡೆದವರು ಮರು ಪಾವತಿಸಲಾಗದೆ ಪರದಾಡುತ್ತಿದ್ದರೆ, ಬಾಡಿಗೆ ಕಟ್ಟಡದಲ್ಲಿ ವ್ಯಾಪಾರ ನಡೆಸುವವರು ಬಾಡಿಗೆ, ವಿದ್ಯುತ್ ಶುಲ್ಕ ಪಾವತಿಸಲಾಗದೆ ತಡಕಾಡುತ್ತಿದ್ದಾರೆ. ನಮ್ಮ ವ್ಯಾಪಾರ ಎಲ್ಲವೂ ಪಾರದರ್ಶಕ. ಸರಕಾರಕ್ಕೆ ಜಿಎಸ್‌ಟಿ ಕಟ್ಟಿಯೇ ನಾವು ವ್ಯಾಪಾರ ನಡೆಸುತ್ತೇವೆ. ಆದರೆ ನಮ್ಮನ್ನು ಇನ್ನೂ ಅವಶ್ಯಕ ಸೇವೆ ಎಂದು ಪರಿಗಣಿಸಲಾಗಿಲ್ಲ. ಲಾಕ್‌ಡೌನ್ ಸಂದರ್ಭ ನಮಗೆ ಸರಕಾರದಿಂದ ಯಾವುದೇ ಬೆಂಬಲವೂ ದೊರಕಿಲ್ಲ. ಬದಲಾಗಿ ವೀಕೆಂಡ್ ಕರ್ಫ್ಯೂ ಮೂಲಕ ನಮ್ಮ ಮೇಲೆ ಮತ್ತಷ್ಟು ಆರ್ಥಿಕ ಹೊರೆಯನ್ನು ಹೊರಿಸಲಾಗಿದೆ. ಲಾಕ್‌ಡೌನ್ ಮುನ್ನ ನಾವು ಖರೀದಿಸಿದ್ದ ಬಟ್ಟೆಬರೆಗಳ ಫ್ಯಾಶನ್ ಔಟ್‌ಡೇಟೆಡ್ ಆಗಿ ಅದನ್ನು ಹಿಂದಿರುಗಿಸಲಾಗದೆ ವ್ಯಾಪಾರವೂ ಆಗದೆ ಪರದಾಡುತ್ತಿದ್ದೇವೆ. ವ್ಯಾಪಾರವಿಲ್ಲದೆ ದ.ಕ. ಜಿಲ್ಲೆಯಲ್ಲಿ ಅಂದಾಜು ಅಂಗಡಿಗಳಲ್ಲಿ ಶೇ. 10ರಷ್ಟು ಸಿಬ್ಬಂದಿ ಕಡಿತವೂ ಆಗಿರಬಹುದು. ಪ್ರಸಕ್ತ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಸಂಘಟನೆಯ ಅಗತ್ಯತೆಯನ್ನು ಮನಗಂಡು ನಾವು ಒಂದಾಗಿದ್ದೇವೆ. ಕರಾವಳಿಯ ರೆಡಿಮೇಡ್ ಟೆಕ್ಸ್‌ಟೈಲ್ಸ್ ವ್ಯಾಪಾರಸ್ಥರು ಒಗ್ಗೂಡಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಹಲವು ಹೋರಾಟ ಮಾಡಿದ್ದೇವೆ. ಮುಂದೆ ಸರಕಾರವು ನಮ್ಮ ವ್ಯಾಪಾರವನ್ನು ಅಗತ್ಯ ಸೇವೆಯೆಂದ ಪರಿಗಣಿಸಬೇಕು. ಸಿಬ್ಬಂದಿಗೆ ಸರಕಾರದ ಸವಲತ್ತನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಹಾಗೂ ಕೇಂದ್ರದ ಜವಳಿ ವಾಣಿಜ್ಯ ಇಲಾಖೆ, ಜವಳಿ ಸಚಿವಾಲಯದ ಗಮನ ಸೆಳೆಯಲು ನಿರ್ಧರಿಸಿದ್ದೇವೆ."

 ಎಂ.ಬಿ. ಸದಾಶಿವ, ಪ್ರ.ಕಾರ್ಯದರ್ಶಿ, ಕರಾವಳಿ ಟೈಕ್ಸ್‌ಟೈಲ್ಸ್, ರೆಡಿಮೇಡ್, ಫೂಟ್‌ವೇರ್ ಡೀಲರ್ಸ್ ಅಸೋಸಿಯೇಶನ್

ದ.ಕ. ಜಿಲ್ಲೆಯಲ್ಲಿ ದಿನವೊಂದಕ್ಕೆ ಕನಿಷ್ಠ 1,000 ರೂ.ನಿಂದ ಗರಿಷ್ಠ 1 ಲಕ್ಷ ರೂ.ಗಳಿಗೂ ಅಧಿಕ ವ್ಯಾಪಾರ ನಡೆಸುವ ಜವಳಿ ಮಳಿಗೆಗಳಿವೆ. ಲಾಕ್‌ಡೌನ್ ಅವಧಿಯನ್ನು ಒಳಗೊಂಡು ಕಳೆದ ಸುಮಾರು ಎರಡು ವರ್ಷಗಳಿಂದೀಚೆಗೆ ದ.ಕ. ಜಿಲ್ಲೆಯಲ್ಲಿ ಜವಳಿ ವ್ಯಾಪಾರಸ್ಥರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಮಾತ್ರವಲ್ಲದೆ, ಸರಕಾರದ ಬೊಕ್ಕಸಕ್ಕೂ ಕೋಟಿಗಟ್ಟಲೆ ತೆರಿಗೆ ಹಣ ನಷ್ಟವಾಗಿದೆ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News