ರಾಜ್ಯ ಸರಕಾರದಿಂದ ಹಿಂದೂ ವಿರೋಧಿ ನೀತಿ: ಚಂದ್ರಶೇಖರ ಪೂಜಾರಿ ಆರೋಪ

Update: 2021-09-21 07:07 GMT

ಬಂಟ್ವಾಳ, ಸೆ.21: ದೇವಸ್ಥಾನ, ದೈವಸ್ಥಾನ ಸಹಿತ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡುವ ಮೂಲಕ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ, ವಕೀಲ ಎಂ.ಚಂದ್ರಶೇಖರ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನವನ್ನು ಧ್ವಂಸ ಮಾಡಿದ ಸರಕಾರ ಬಳಿಕ ಅಧಿಕಾರಿಗಳನ್ನು ಹೊಣೆ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಇದ್ದಾಗಲೂ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತ್ತು. ಆದರೆ ಕಾಂಗ್ರೆಸ್ ಸರಕಾರ ದೇವಸ್ಥಾನವನ್ನು ತೆರವುಗೊಳಿಸುವಂತಹ ಕೆಲಸ ಮಾಡದೆ ಅದರ ರಕ್ಷಣೆ ಮಾಡಿತ್ತು ಎಂದು ಹೇಳಿದರು.

ತೈಲ, ಗ್ಯಾಸ್ ಸಹಿತ ದಿನ ಬಳಕೆ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಿಂದ ಜನರು ಕಂಗಾಲಾಗಿದ್ದು, ಬೆಲೆ ಏರಿಕೆಯನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿವೆ. ದೇಶದ ಆರ್ಥಿಕ ಪರಿಸ್ಥಿತಿಯು ಪತನದ ಅಂಚಿಗೆ ತಲುಪಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವಜನರು, ವಿದ್ಯಾವಂತರು ಪರದಾಡುತ್ತಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಕೇಂದ್ರ ಸರಕಾರ ಎಲ್ಲಿ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಪೂಜಾರಿ ಪ್ರಶ್ನಿಸಿದರು.

ಬಂಟ್ವಾಳ ಕ್ಷೇತ್ರ ಸಹಿತ ಜಿಲ್ಲೆಯಲ್ಲಿ ಯಾವುದೇ ಕೃತ್ಯ ನಡೆದಾಗ ಅದರಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹೆಸರನ್ನು ಎಳೆತಂದು ಅಪಪ್ರಚಾರ ಮಾಡುವ ಕಾರ್ಯ ನಡೆಯುತ್ತಿದೆ‌. ಕ್ಷುಲ್ಲಕ ವಿಚಾರಕ್ಕೂ ರೈ ಅವರ ಹೆಸರನ್ನು ಥಳಕು ಹಾಕಿ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ನಡೆಸಿದರೆ ಕಾಂಗ್ರೆಸ್ ಪಕ್ಷ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ, ಜಗನ್ನಾಥ್ ತುಂಬೆ, ಲೋಕೇಶ್, ವೆಂಕಪ್ಪ ಪೂಜಾರಿ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News