ಪುತ್ತೂರು: ಲಾಡ್ಜ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ತಂಡದಿಂದ ಹಲ್ಲೆ; ಮಹಿಳೆಯಿಂದ ದೂರು

Update: 2021-09-21 08:40 GMT

ಪುತ್ತೂರು, ಸೆ.21: ಪೊಲೀಸ್ ವಶದಲ್ಲಿದ್ದ ಕಾರನ್ನು ಬಿಡಿಸಲು ಬೆಂಗಳೂರಿನಿಂದ ನಗರಕ್ಕೆ ಬಂದಿದ್ದ ಮಹಿಳೆ ಹಾಗೂ ಜೊತೆಗೆ ಕೆಲಸ ಮಾಡುವ ಇಬ್ಬರು ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿರುವುದಾಗಿ ಸಂತ್ರಸ್ತ ಮಹಿಳೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಇದರನ್ವಯ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಬೆಂಗಳೂರು ಆನೇಕಲ್ ತಾಲೂಕಿನ ಹಳೇಪೇಟೆ ನಿವಾಸಿ ರಾಜೇಶ್ವರಿ(36) ಎಂಬವರ ಕಾರು ಪ್ರಕರಣವೊಂದಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರ ವಶದಲ್ಲಿದ್ದು, ಇದನ್ನು ಬಿಡಿಸಲೆಂದು ಅವರು ಸೆ.18ರಂದು ಪುತ್ತೂರಿಗೆ ಆಗಮಿಸಿದ್ದಾರೆ. ಅವರ ಜೊತೆಗೆ ಕೆಲಸ ಮಾಡುತ್ತಿರುವ ಉಳ್ಳಾಲ ನಿವಾಸಿ ಯು.ಕೆ.ಮುಹಮ್ಮದ್ ಅರಾಫತ್ ಮತ್ತು ಬೆಂಗಳೂರು ಕೊಟ್ಟಿಗೇರಿ ನಿವಾಸಿ ಶಿವ ಕೂಡಾ ಜೊತೆಗಿದ್ದರು. ಈ ಮೂವರು ನಗರದ ಬೈಪಾಸ್ ಬಳಿಯಿರುವ ಲಾಡ್ಜ್ ವೊಂದರಲ್ಲಿ ತಂಗಿದ್ದರು. ಸೆ.20ರಂದು ಸಂಜೆ ಇವರು ಲಾಡ್ಜ್ ನಲ್ಲಿ ಊಟ ಮಾಡುತ್ತಿದ್ದ ವೇಳೆ 4-5 ಮಂದಿಯಿದ್ದ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಶಿವ ಮೇಲೆ ಹಲ್ಲೆ ನಡೆಸಿದೆ. ಹಾಗೂ ತಮ್ಮ ಫೋಟೋ ತೆಗೆದು ಅವಮಾನಿಸಿದ್ದಾರೆ ಎಂದು ರಾಜೇಶ್ವರಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News