"ಎಪಿಎಂಸಿ ಕಾಯ್ದೆ ತಿದ್ದುಪಡಿ ಬಳಿಕ ಹೊರಗುತ್ತಿಗೆಯಲ್ಲಿದ್ದ 1,231 ಸಿಬ್ಬಂದಿ ಹೊರಕ್ಕೆ"

Update: 2021-09-21 10:55 GMT

ಮಂಗಳೂರು, ಸೆ.21: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಕಾಯ್ದೆ ತಿದ್ದುಪಡಿಯಾದ ಬಳಿಕ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 1231 ಸಿಬ್ಬಂದಿಯನ್ನು ಕೈಬಿಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಸದಸ್ಯ ಕೆ. ಹರೀಶ್ ಕುಮಾರ್ ಕೇಳಿರುವ ಪ್ರಶ್ನೆಗೆ ರಾಜ್ಯ ಸಹಕಾರ ಸಚಿವರಿಂದ ಲಿಖಿತ ಉತ್ತರ ಲಭಿಸಿದೆ.

ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಮೊದಲು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಹಾಗೂ ಕಾಯ್ದೆ ತಿದ್ದುಪಡಿ ಬಳಿಕ ಕೈಬಿಡಲಾದ ಸಿಬ್ಬಂದಿ ಹಾಗೂ ಸರಕಾರ ಕೈಗೊಂಡ ಪರಿಹಾರ ಕ್ರಮಗಳೇನು ಎಂದು ಹರೀಶ್ ಕುಮಾರ್ ಅವರು ಪ್ರಶ್ನಿಸಿದ್ದರು.

ಇದಕ್ಕೆ ಲಿಖಿತ ಉತ್ತರ ನೀಡಿರುವ ಸಹಕಾರ ಸಚಿವರು, ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಪೂರ್ವದಲ್ಲಿ 2,969 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ 1,231 ಮಂದಿ ಸಿಬ್ಬಂದಿಯನ್ನು ಕೈಬಿಡಲಾಗಿದೆ. ಎಪಿಎಂಸಿ ಸಮಿತಿಗಳಲ್ಲಿ ಲಭ್ಯವಿರುವ ಆದಾಯಕ್ಕೆ ಅನುಗುಣವಾಗಿ ಖಾಸಗಿ ಮಾನವ ಸಂಪನ್ಮೂಲ ಸೇವೆ ಒದಗಿಸುವ ಏಜೆನ್ಸಿಗಳ ಮೂಲಕ ಟೆಂಡರ್ ಕರೆದು 11 ತಿಂಗಳಿಗೊಮ್ಮೆ ಹೊರಗುತ್ತಿಗೆ ಸಿಬ್ಬಂದಿ ಸೇವೆ ಪಡೆಯಲಾಗುತ್ತಿರುತ್ತದೆ. ಪ್ರಸಕ್ತ ಸಮಿತಿಗಳ ಅಗತ್ಯತೆಗೆ ಅನುಗುಣವಾಗಿ ಹೊರಗುತ್ತಿಗೆ ಸಂಸ್ಥೆಯಿಂದ ನಿಯೋಜಿಸಲಾದ ಒಟ್ಟು 1,738 ಹೊರಗುತ್ತಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಹಕಾರ ಸಚಿವರು ಉತ್ತರಿಸಿದ್ದಾರೆ.

ರಾಜ್ಯದ 160 ಎಪಿಎಂಸಿಗಳು ಒಟ್ಟು 8584 ಎಕರೆ ಜಮೀನನ್ನು ಹೊಂದಿವೆ ಎಂದೂ ಹರೀಶ್ ಕುಮಾರ್ ಪ್ರಶ್ನೆಯೊಂದಕ್ಕೆ ಸಹಕಾರ ಸಚಿವರಿಂದ ಲಿಖಿತ ಉತ್ತರ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News