ಉಡುಪಿ: ಪ್ರತಿಭಟನಕಾರರ ವಿರುದ್ಧ ಕೇಸ್; ಎಸ್‌ಡಿಪಿಐಯಿಂದ ಕಾನೂನು ಹೋರಾಟ: ಭಾಸ್ಕರ್ ಪ್ರಸಾದ್

Update: 2021-09-21 12:07 GMT

ಉಡುಪಿ, ಸೆ.21: ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು, ಮುಖಂಡರು ಹಾಗೂ ಅತಿಥಿಗಳ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪ್ರತಿಭಟಿಸುವ ಹಕ್ಕನ್ನು ಕಸಿಯುವ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಮಹಿಳಾ ಪೊಲೀಸ್ ಅಧಿಕಾರಿಯ ಅತ್ಯಾಚಾರ ಕೊಲೆ ಪ್ರಕರಣವನ್ನು ಖಂಡಿಸಿ ಎಸ್‌ಡಿಪಿಐ ವತಿಯಿಂದ ಸೆ.14ರಂದು ಉಡುಪಿಯಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಅನುಮತಿ ನೀಡಿದ್ದರು. ಅದರಂತೆ ಎಲ್ಲ ರೀತಿಯ ಕೋವಿಡ್ ನಿಯಮ ಪಾಲಿಸಿಕೊಂಡು ಉತ್ತಮ ರೀತಿಯಲ್ಲಿ ಮತ್ತು ಶಾಂತಿ ಯುತವಾಗಿ ಜಾಥ ಮತ್ತು ಪ್ರತಿಭಟನೆ ನಡೆಸಲಾಗಿತ್ತು ಎಂದರು.

ಪ್ರತಿಭಟನೆ ಮುಗಿದ ಬಳಿಕ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರು ಮತ್ತು ವೃತ್ತ ನಿರೀಕ್ಷಕರ ಆದೇಶದ ಮೇರೆಗೆ ಎಸ್‌ಡಿಪಿಐಯ ಹಲವು ಮಂದಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಲಾಯಿತು. ಅಲ್ಲದೆ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಅತಿಥಿಗಳು ಹಾಗೂ ಮಹಿಳಾ ಅತಿಥಿಗಳ ಮೇಲೂ ಪ್ರಕರಣವನ್ನು ದಾಖಲಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ಅವರು ದೂರಿದರು.

ಈ ಮೊದಲು ಕೋವಿಡ್ ಸಂದರ್ಭದಲ್ಲಿಯೇ ಧಾರ್ಮಿಕ ಹಾಗೂ ಕೆಲವು ಸಂಘಟನೆಗಳು ಕಾರ್ಯಕ್ರಮಗಳನ್ನು ನಡೆಸಿದರೂ ಅವರ ವಿರುದ್ಧ ಯಾವುದೇ ಕೇಸು ದಾಖಲಿಸದ ಪೊಲೀಸ್ ಇಲಾಖೆ ಈಗ ನಮ್ಮ 35ಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಿಸಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಪೊಲೀಸ್ ಅಧಿಕಾರಿ ಯಾರ ಒತ್ತಡಕ್ಕೆ ಮಣಿದು ಈ ಕೇಸು ದಾಖಲಿಸಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಪ್ರತಿಭಟಿಸುವ ಹಕ್ಕನ್ನು ಕಸಿಯುವ ಮೂಲಕ ಜಿಲ್ಲೆಯಲ್ಲಿ ಎಸ್‌ಡಿಪಿಐಯನ್ನು ಧಮನಿಸುವ ಹಾಗೂ ಧ್ವೇಷದ ವಾತಾವರಣ ವನ್ನು ಸೃಷ್ಠಿಸಲು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಮುಂದಾಗಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ಇಲ್ಯಾಸ್, ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉಮಾನಾಥ್, ರಾಜ್ಯ ಸಮಿತಿ ಸದಸ್ಯ ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಜೀದ್ ಉಚ್ಚಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News