ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ : ಹಳೆ ಬಸ್ಸು ನಿಲ್ದಾಣ, ಬಂಡೀಮಠ ಸಮಾನ ಬಳಕೆಗೆ ನಿರ್ಧಾರ

Update: 2021-09-21 12:39 GMT

ಕಾರ್ಕಳ: ಹಳೆ ಬಸ್ಸು ನಿಲ್ದಾಣ ಮತ್ತು ಬಂಡೀಮಠವನ್ನು ಸಮಾನ ಬಳಕೆಗೆ ಮಾಡುವ ಬಗ್ಗೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. 
ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಶ್ಫಕ್ ಅಹ್ಮದ್ ಮಾತನಾಡಿ, ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗಳು ಆಸಕ್ತಿ ವಹಿಸಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಶೀಘ್ರದಲ್ಲಿ ಈ ನಿರ್ಧಾರ ಕೈಗೊಳ್ಳದಿದ್ದಲ್ಲಿ ನ್ಯಾಯಾಂಗದ ಆದೇಶ ಉಲ್ಲಂಘಿಸಿದಂತಾಗುತ್ತದೆ. ಈಗಾಗಲೇ ಈ ಆದೇಶ ಅನುಷ್ಟಾನ ಕುರಿತಂತೆ ಉಚ್ಚ ನ್ಯಾಯಾಲಯಕ್ಕೆ ಮಗದೊಮ್ಮೆ ಮೊರೆ ಹೋಗಿರುವುದನ್ನು ಸಭೆಯ ಗಮನಕ್ಕೆ ತಂದರು. ಪುರಸಭೆ ವ್ಯಾಪ್ತಿ ವಾರ್ಡ್‍ಗಳಲ್ಲಿ ದಾರಿದೀಪಗಳ ನಿರ್ವಹಣೆಯನ್ನು ಸಮಂಜಸವಾಗಿ ನಡೆಸುವಂತೆ ನಳಿನಿ ಆಚಾರ್ಯ, ಪ್ರಭಾ ಮತ್ತು ರೆಹಮತ್ ಎನ್.ಶೇಖ್ ಆಗ್ರಹಿಸಿದರು.

ವಿನ್ನಿಬೋಲ್ಡ್ ಮೆಂಡೋನ್ಸಾ ವಾರ್ಡ್‍ಗಳಲ್ಲಿ ರಸ್ತೆಯಂಚಿನ ಮರಗಳು ಹಾಗೂ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯಾಧಿಕಾರಿಗಳ ಗಮನ ಸೆಳೆದರು. ಪುರಸಭೆಯಿಂದ ಏಲಂಗೊಂಡ ಅಂಗಡಿಗಳು ಕೊರೊನಾ ಸಂದರ್ಭ ನಷ್ಟ ಅನುಭವಿಸಿದೆ ಎನ್ನುವ ಕಾರಣಕ್ಕೆ ಬಾಡಿಗೆಯಲ್ಲಿ ರಿಯಾಯಿತಿ ತೋರ್ಪಡಿಸುವುದಾದರೆ, ಎಲ್ಲರಿಗೂ ಸಹಕರಿಸಿ ಎಂದು ಶೋಭಾ ದೇವಾಡಿಗ ಆಗ್ರಹಿಸಿದರು. ಪುರಸಭೆ ಕಂದಾಯ ಪರಿವೀಕ್ಷಕ ಸಂತೋಷ್ ಮಾತನಾಡಿ, 12 ವರ್ಷಗಳ ಕಾಲ ಏಲಂಗೊಳಿಸಿದ ಅಂಗಡಿಗಳಿಗೆ ಆ ಅವಕಾಶಗಳಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.

ಇಂದಿರಾ ಕ್ಯಾಂಟೀನ್ ಬಳಕೆ:

ಪುರಸಭೆಯ ಸಾಮಾನ್ಯ ಸಭೆಯಂದು ಊಟ ಮತ್ತು ಉಪಹಾರಕ್ಕಾಗಿ ಇಂದಿರಾ ಕ್ಯಾಂಟೀನ್ಗೆ ತೆರಳಬೇಕು ಎಂದು ನಾಮನಿರ್ದೇಶಿತ ಸದಸ್ಯ ಪ್ರಸನ್ನ ಅವರು ಅಭಿಪ್ರಾಯಿಸಿದರು. ಅಧ್ಯಕ್ಷೆ ಸುಮ ಕೇಶವ್ ಮಾತನಾಡಿ, ನಾವು ಅಲ್ಲಿಗೆ ತೆರಳಿ ಊಟ ಮತ್ತು ಉಪಹಾರವನ್ನು ಮಾಡೋಣ. ಇದರಿಂದ ಪುರಸಭೆಗೂ ಆದಾಯವಾಗುತ್ತದೆ ಎಂದರು. ಶುಭದ ರಾವ್ ಮಾತನಾಡಿ, ಪುರಸಭೆಯ ಎಲ್ಲಾ ಕಾರ್ಯಕ್ರಮಗಳಿಗೂ ಇಂದಿರಾ ಕ್ಯಾಂಟೀನ್ ಆಹಾರವನ್ನೇ ಉಪಯೋಗಿಸುವಂತೆ ನಿರ್ಣಯಿಸಿ ಎಂದರು. 

ಇ-ಟಾಯ್ಲೆಟ್ 

ಪುರಸಭೆಯಲ್ಲಿ ಇ-ಟಾಯ್ಲೆಟ್ ನಿರ್ಮಾಣವಾಗಿದ್ದರೂ, ಈವೆರೆಗೆ ಬಳಕೆಯಾಗುತ್ತಿಲ್ಲ ಎಂದು ಪ್ರತಿಮಾ ರಾಣೆ ಆರೋಪಿಸಿದರು. ಮುಖ್ಯಾಧಿಕಾರಿ ರೂಪಾ ಜಿ.ಶೆಟ್ಟಿ ಮಾತನಾಡಿ, ಇದು ನಗರೋತ್ಹಾನ ನಿಧಿಯಿಂದ ನಿರ್ಮಾಣಗೊಂಡ ಟಾಯ್ಲೆಟ್. ಬೆಂಗಳೂರಿನ ಗುತ್ತಿಗೆದಾರ ಕೆಲಸ ನಿರ್ವಹಿಸಿದ್ದಾರೆ. ಆತನಿಗೂ ಈ ಬಗ್ಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಆತನಿಗೆ ಬಾಕಿ ಇರುವ ಬಿಲ್ಲನ್ನು ತಡೆ ಹಿಡಿದಿದ್ದೇವೆ ಎಂದರು.

ಶುಭದ ರಾವ್ ಮಾತನಾಡಿ, ಇ-ಟಾಯ್ಲಟ್ ಸಾರ್ವಜನಿಕ ಟಾಯ್ಲೆಟ್ ಆಗಿದ್ದು, 300 ಲೀಟರ್ ನೀರು ಮಾತ್ರ ಬಳಕೆಗೆ ಅವಕಾಶವಿದೆ ಎಂದರು. ಅಧ್ಯಕ್ಷೆ ಸುಮ ಕೇಶವ್ ಮಾತನಾಡಿ, ಸದ್ಯೋಜ್ಯೋತ ಪಾರ್ಕ್ ಬಳಿಯಿರುವ ಇ-ಟಾಯ್ಲೆಟನ್ನು ಬೇರೆ ಕಡೆ ವರ್ಗಾಯಿಸುವ. ಈಗಗಲೇ ಪಾರ್ಕ್‍ನಲ್ಲಿರುವ ಟಾಯ್ಲೆಟ್ ಬಳಕೆಗೆ ಪ್ರಯತ್ನಿಸೋಣ ಎಂದರು. ಅಲ್ಲದೆ ಪ್ರತಿ ಟಾಯ್ಲಟ್‍ಗೂ ನೀರಿನ ಟ್ಯಾಂಕ್ ನಿರ್ಮಿಸಿ ವ್ಯವಸ್ಥೆ ಕಲ್ಪಿಸುವಲ್ಲಿ ಪ್ರಯತ್ನಿಸೋಣ ಎಂದರು.

ಕಸ ಸಂಗ್ರಹ ಸಮಸ್ಯೆ

ನೀತಾ ಆಚಾರ್ಯ ಮಾತನಾಡಿ, ನಾನು ಪ್ರತಿನಿಧಿಸುವ ವಾರ್ಡ್ ಗುಂಡ್ಯ ಪ್ರದೇಶಕ್ಕೆ ಕಸದ ವಾಹನವೇ ಬರುತ್ತಿಲ್ಲ. ಸ್ಥಳೀಯರು ನನ್ನ ಮನೆಗೆ ತಂದು ಕಸ ಎಸೆಯುವುದಾಗಿ ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ಪರಿವೀಕ್ಷಕಿ ಲೈಲಾ ಥೋಮಸ್ ಮಾತನಾಡಿ, ಪೌರ ಕಾರ್ಮಿಕರ ಕೊರತೆ ಎಂದರು. ಸಂತೋಷ್ ರಾವ್ ಮಾತನಾಡಿ, ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಸ್ಪಂದಿಸಿ ಎಂದರು. ಯೋಗೀಶ್ ದೇವಾಡಿಗ ಮಾತನಾಡಿ, ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮರ್ಪಕವಾಗಿ ಸ್ಪಂದಿಸಿ. ಪೌರ ಕಾರ್ಮಿಕರ ಸಮಸ್ಯೆಯನ್ನು ಸರಿಪಡಿಸಿ ಎಂದರು. ಶಶಿಕಲಾ ಶೆಟ್ಟಿ ಮಾತನಾಡಿ, ನಮ್ಮ ನೆರಮನೆಯ ಟಾಯ್ಲೆಟ್ ನೀರು ರಸ್ತೆಗೆ ಹರಿಯುವ ಬಗ್ಗೆ ಮೂರು ತಿಂಗಳಿನಿಂದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಮಾತಿನ ಚಕಮಕಿ

ಅಜೆಂಡಾದಲ್ಲಿ ವಿವರಗಳನ್ನು ಸಭೆಗೆ ಮಂಡಿಸುತ್ತಾ ಸಾಗುವ ವೇಳೆ, ಈಗಾಗಲೇ ಮಂಡಿಸಿರುವ ವಿಷಯದ ಬಗ್ಗೆ ಹರೀಶ್ ಮರುಪ್ರಶ್ನಿಸಿದರು. ಪ್ರದೀಪ್ ಮಾರಿಗುಡಿ ಮತ್ತು ಯೋಗೀಶ್ ದೇವಾಡಿಗ ಮಾತನಾಡಿ, ಈಗಾಗಲೇ ಓದಲಾಗಿರುವ ವಿಷಯವನ್ನು ಕೆಲ ಹೊತ್ತುಗಳ ಬಳಿಕ ಪ್ರಶ್ನಿಸು ವುದಾದರೆ, ಓದುವ ವೇಳೆ ನೀವು ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನಿಸಿದರು. ಅದೇ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಮುಂದುವರೆದಿತ್ತು.

ಪುರಸಭೆ ಅಧ್ಯಕ್ಷೆ ಸುಮ ಕೇಶವ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಪಲ್ಲವಿ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಮುಖ್ಯಾಧಿಕಾರಿ ರೂಪ ಜಿ.ಶೆಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News