ಭಾಷೆಗಳನ್ನು ಕಲಿತಷ್ಟು ಆತ್ಮವಿಶ್ವಾಸ ವೃದ್ಧಿ : ಕಮಿಷನರ್ ಎನ್. ಶಶಿಕುಮಾರ್

Update: 2021-09-21 14:45 GMT

ಮಂಗಳೂರು, ಸೆ. 21: ನಾವು ಕೆಲಸ ಮಾಡುವ ನೆಲದ ಭಾಷೆ, ಆಚರಣೆ, ಸಂಸ್ಕೃತಿ ಮೊದಲಾದವನ್ನು ಕಲಿತು ಗೌರವಿಸಿದರೆ ಕೆಲಸ ನಿರ್ವಹಣೆ ಸಮಸ್ಯೆಯಾಗದು. ಜತೆಗೆ ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜರಗಿದ ತುಳು ಮತ್ತು ಬ್ಯಾರಿ ಭಾಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಹೊರ ಜಿಲ್ಲೆಯ ಪೊಲೀಸ್ ಸಿಬಂದಿಗೆ ಒಂದು ತಿಂಗಳ ಕಾಲ ತುಳು ಮತ್ತು ಬ್ಯಾರಿ ಭಾಷೆ ಕಲಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಮೂಲಕ ಪೊಲೀಸರು ಜನರಿಗೆ ಹತ್ತಿರವಾಗುತ್ತಾರೆ ಎಂಬ ಭಾವನೆ ನಮ್ಮದಾಗಿದೆ ಎಂದವರು ಹೇಳಿದರು.

ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅವರು ಮಾತನಾಡಿ, ತುಳು ಭಾಷೆ ತುಳುವರನ್ನು ಸುಸಂಸ್ಕೃತರನ್ನಾಗಿಸುವ ಸಾಮರ್ಥ್ಯ ಹೊಂದಿದೆ. ಪೊಲೀಸರಿಗೆ ತುಳು ಮತ್ತು ಬ್ಯಾರಿ ಕಲಿಸುವ ಕಾರ್ಯ ಶ್ಲಾಘನೀಯ ಎಂದರು.

ಒಂದು ತಿಂಗಳ ಕಾಲ ನಡೆದ ತುಳು ಮತ್ತು ಬ್ಯಾರಿ ಭಾಷೆ ಕಲಿಕಾ ತರಬೇತಿ ಶಿಬಿರದಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಇತರ ಜಿಲ್ಲೆಗಳ 55 ಮಂದಿ ಪೊಲೀಸ್ ಸಿಬಂದಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ಪೊಲೀಸರ ಬಗ್ಗೆ ಶಿಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಪಿ.ದಿನೇಶ್ ಕುಮಾರ್, ಸಿಎಆರ್ ಡಿಸಿಪಿ ಹಡಪದ್ ಉಪಸ್ಥಿತರಿದ್ದರು.

ರಾಜೇಶ್ ಕದ್ರಿ, ಸುಧಾನ ನಾಗೇಶ್ ಅವರು ತುಳು ಭಾಷಾ ಶಿಕ್ಷಕರಾಗಿ, ಶಂಶೀರ್ ಬಂಡೋಳಿ, ರಜಾಕ್ ಅನಂತವಾಡಿ ಮತ್ತು ಅಶ್ರುದ್ದಿನ್ ಸತ್ರಾಬೈಲ್ ಬ್ಯಾರಿ ಭಾಷಾ ಶಿಕ್ಷಕರಾಗಿ ಪಾಲ್ಗೊಂಡಿದ್ದರು. ಸಂಚಾರ ವಿಭಾಗದ ಎಸಿಪಿ ಎಂ.ಎ.ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News