​ಮನೆ ಲೀಸ್ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ: ದೂರು

Update: 2021-09-21 16:00 GMT

ಮಂಗಳೂರು, ಸೆ.21; ಪ್ಲಾಟ್ ಲೀಸ್‌ಗೆ ಕೊಡುವುದಾಗಿ ನಕಲಿ ದಾಖಲೆ ತೋರಿಸಿ, ಮಹಿಳೆಯೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಬೆಳ್ತಂಗಡಿ ಮೂಲದವರಾಗಿದ್ದು, ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 2020ರ ಜೂನ್ ತಿಂಗಳಲ್ಲಿ ಇವರು ಬಾಡಿಗೆ ಮನೆ ಪಡೆಯಲು ಹುಡುಕಾಟದಲ್ಲಿದ್ದರು. ಈ ವೇಳೆ, ಕದ್ರಿ ಪರಿಸರದ ನಿವಾಸಿ ಪ್ರದೀಪ್ ಎಂಬ ಬ್ರೋಕರ್ ಪರಿಚಯ ಆಗಿದ್ದು, ಕೆ.ಎಸ್.ರಾವ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ನೆಲಮಹಡಿಯಲ್ಲಿ ಮನೆಯೊಂದು ಲೀಸ್‌ಗೆ ಇರುವುದಾಗಿ ತಿಳಿಸಿದ್ದಾನೆ.

ಮನೆಯನ್ನು ನೋಡಿದ ಮಹಿಳೆ, ಇಷ್ಟ ಆಗಿದ್ದರಿಂದ ಅದನ್ನು 5 ಲಕ್ಷ ರೂಪಾಯಿಗೆ ಲೀಸ್‌ಗೆ ಪಡೆಯಲು ಮುಂದಾಗಿದ್ದರು. ಅದರಂತೆ, ಬ್ರೋಕರ್ ಮನೆಯ ಮಾಲಕನೆಂದು ಮುಹಮ್ಮದ್ ಅಶ್ರಫ್ ಎಂಬವರನ್ನು ತೋರಿಸಿದ್ದ. ಇವರು ಮನೆ ಮಾಲಕರಾಗಿದ್ದು, 5 ಲಕ್ಷ ರೂ. ಇವರ ಹೆಸರಲ್ಲಿ ಡಿಪಾಸಿಟ್ ಮಾಡುವಂತೆ ಹೇಳಿದ್ದ. ಮಹಿಳೆ ಬಳಿಕ ಹಣ ಒಟ್ಟುಗೂಡಿಸಿ, ಮುಹಮ್ಮದ್ ಅಶ್ರಫ್ ಅವರ ಹೆಸರಿನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು ಎಂದು ತಿಳಿದುಬಂದಿದೆ.

ನಂತರ, ಎರಡೂ ಪಾರ್ಟಿಗಳಿಂದ ಲೀಸ್ ಅಗ್ರೀಮೆಂಟ್ ನಡೆದಿದ್ದು, ಮಹಿಳೆ ತನ್ನ ವಾಸವನ್ನು ಬದಲಿಸಿ ಅಲ್ಲಿಗೆ ಶಿಫ್ಟ್ ಮಾಡಿಕೊಂಡಿದ್ದರು. ಆದರೆ, ಮೂರು ತಿಂಗಳ ನಂತರ ಮುಹಮ್ಮದ್ ಅಲಿ ಎಂಬಾತ ಬಂದಿದ್ದು, ಈ ಮನೆ ತನ್ನ ಹೆಸರಲ್ಲಿದೆ. ನೀವು ಬಂದು ಮೂರು ತಿಂಗಳು ಆಗಿದೆ. ಬಾಡಿಗೆ ಕೊಡುವಂತೆ ಒತ್ತಾಯಿಸಿದ್ದಾನೆ. ಮಹಿಳೆ ತಾನು ಮಾಡಿದ್ದ ಲೀಸ್ ಅಗ್ರೀಮೆಂಟ್ ತೋರಿಸಿ, 5 ಲಕ್ಷ ರೂ. ಡಿಪಾಸಿಟ್ ಮಾಡಿದ್ದನ್ನು ಹೇಳಿದ್ದಾರೆ. ಆದರೆ, ಅದ್ಯಾವುದಕ್ಕೂ ಒಪ್ಪದ ಆತ, ಈ ಮನೆ ನನ್ನ ಹೆಸರಲ್ಲಿದೆ. ನೀವು ಯಾರಿಗೆ ಹಣ ಹಾಕಿದ್ದೀರೋ ಗೊತ್ತಿಲ್ಲ ಎಂದು ಹೇಳಿದ್ದಾನೆ. ಅಷ್ಟರಲ್ಲಿ ತಾನು ಮೋಸ ಹೋಗಿದ್ದು ಮಹಿಳೆಗೆ ಅರಿವಾಗಿದ್ದು ನಕಲಿ ಡಾಕ್ಯುಮೆಂಟ್ ಹೆಸರಲ್ಲಿ ವಂಚನೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ವಂಚಕರು ಇದೇ ರೀತಿ ಹಲವರನ್ನು ಮೋಸ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಖಾಲಿ ಮನೆಗಳನ್ನು ಬಾಡಿಗೆಗೆ ಪಡೆದು, ಬಳಿಕ ಅದನ್ನೇ ಬೇರೆಯವರಿಗೆ ಲೀಸ್‌ಗೆ ಕೊಟ್ಟು ದೊಡ್ಡ ಮೊತ್ತವನ್ನು ಪಡೆದು ವಂಚಿಸುತ್ತಿದ್ದಾರೆ. ಇವರ ಜಾಲ ಸಕ್ರಿಯವಾಗಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News