ಹೆಜಮಾಡಿಯಲ್ಲಿ ಅಕ್ರಮ ಮರಳುಗಾರಿಕೆ ಆರೋಪ: ಗ್ರಾಮಸಭೆಯಲ್ಲಿ ಕ್ರಮಕ್ಕೆ ಒತ್ತಾಯ

Update: 2021-09-21 16:05 GMT

ಪಡುಬಿದ್ರಿ: ಉಡುಪಿ ಜಿಲ್ಲೆಯ ಶಾಂಭವಿ ನದಿಯಲ್ಲಿ ಮರಳುಗಾರಿಕೆ ಮಾಡುತ್ತಿರುವುದರಿಂದ ಹೆಜಮಾಡಿ ಗ್ರಾಮದ ಕುದ್ರು ಪ್ರದೇಶಗಳಲ್ಲಿ ಭೂಕುಸಿತವಾಗುತ್ತಿದೆ ಎಂದು ಮಂಗಳವಾರ ನಡೆದ ಹೆಜಮಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹೆಜಮಾಡಿ ಗ್ರಾಮ ಪಂ. ಗ್ರಾಮಸಭೆಯಲ್ಲಿ ಗ್ರಾಮಸ್ಥರು, ಉಡುಪಿ ಜಿಲ್ಲೆಯಲ್ಲಿ  ಸಿಆರ್‍ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧವಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಅಕ್ರಮವಾಗಿ ಮರಳುಗಾರಿಕೆ ನಡೆಸುತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಗಣಿ ಇಲಾಖೆಗೆ ದೂರು ನೀಡಲಾಗಿದೆ. ಆದರೆ  ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುವುದು ಸರಿಯಲ್ಲ ಎಂದು ಗ್ರಾಮಸ್ಥರಾದ ವಾಮನ ಕೋಟ್ಯಾನ್ ಹಾಗೂ ಸುಧಾಕರ ಕರ್ಕೇರ ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ಮರಳುಗಾರಿಕೆ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಗಣಿ ಇಲಾಖೆ ಅಧಿಕಾರಿ ವಿವರಿಸಿದರು. ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂಭವಿ ನದಿ ಭಾಗದಲ್ಲಿ ಮರಳು ದಿಬ್ಬವನ್ನು ಗುರುತಿಸಿ ಸಿಆರ್‍ಝಡ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಸಂತ್ರಸ್ಥರಾದ ಹೆಜಮಾಡಿ ಶಿವನಗರದ 15 ಕುಟುಂಬಗಳಿಗೆ ಹೆಜಮಾಡಿ ಪಂಚಾಯಿತಿ ಬಳಿಯ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರಾಗಿ ನಿರ್ಮಿತಿ ಕೇಂದ್ರ ಮೂಲಕ ಮನೆ ನಿರ್ಮಾಣ ಕಾರ್ಯ 4 ವರ್ಷಗಳ ಹಿಂದೆ ಆರಂಭಿಸಿ ದ್ದರೂ, ಪೂರ್ಣವಾಗದಿರುವ ಬಗ್ಗೆ ಸಂತ್ರಸ್ಥರು ಸಭೆಯಲ್ಲಿ ಅಳಲು ತೋಡಿಕೊಂಡರು.

ಈಗಾಗಲೇ ಕಾಮಗಾರಿ ಪೂರ್ಣಗೊಳಿಸುವಂತೆ ಈಗಾಗಲೇ ಹಲವು ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಾಗಿದೆ. ಗ್ರಾಮ ಪಂ. ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ತ್ವರಿತ ಕಾಮಗಾರಿಗಾಗಿ ಒತ್ತಡ ತರಲಾಗುತ್ತಿದೆ. ಸಂತ್ರಸ್ಥರು ಕೂಡಾ ಉದ್ಯೋಗ ಚೀಟಿ ಮಾಡಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಸಾಮೂಹಿಕ ಕಾಮಗಾರಿ ಕೈಗೊಳ್ಳುವಲ್ಲಿಯೂ ಕೈಜೋಡಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಹಾಗೂ ಪ್ರಭಾರ ಪಿಡಿಒ ಸುಮತಿ ಹೇಳಿದರು.

ಹೆಜಮಾಡಿಯಲ್ಲಿ 99 ಶೇ. ಲಸಿಕೆ ವಿತರಣೆ

ಹೆಜಮಾಡಿ ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟ 6966 ಮಂದಿಯಲ್ಲಿ 6896 ಜನರಿಗೆ ಪ್ರಥಮ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ. ಗ್ರಾಮದಲ್ಲಿ ಇನ್ನೂ 70 ಮಂದಿ ಲಸಿಕೆ ಪಡೆಯಲು ಬಾಕಿ ಇದೆ. 99 ಶೇಕಡಾ ಸಾಧನೆ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವವರ ಮನವೊಲಿಸಿ ಗ್ರಾಮದಲ್ಲಿ 100 ಶೇಕಡ ಲಸಿಕೆ  ಪೂರ್ಣಗೊಳಿಸುವಲ್ಲಿ ಸಹಕರಿಸುವಂತೆ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಾಜಶ್ರೀ ಕಿಣಿ ಮನವಿ ಮಾಡಿದರು.

ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಪವಿತ್ರ ಗಿರೀಶ್, ಮಾರ್ಗದರ್ಶಿ ಅಧಿಕಾರಿ ಸುಂದರ ನಾಯ್ಕ್ ವೈ, ಪಿಡಿಒ ಪ್ರವೀಣ್ ಡಿಸೋಜ ಉಪಪಸ್ಥಿತರಿದ್ದರು. ಲೆಕ್ಕ ಸಹಾಯಕಿ ನಿರ್ಮಲ ಶೆಟ್ಟಿ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News