ಗ್ರಾಪಂಗಳ ವಾಚನಾಲಯಕ್ಕೆ ಶಾಲಾ ಪಠ್ಯಪುಸ್ತಕಗಳ ವಿತರಣೆ

Update: 2021-09-21 16:12 GMT

ಉಡುಪಿ, ಸೆ.21: ಬೆಂಗಳೂರು ಪಠ್ಯಪುಸ್ತಕ ಸಮಿತಿಯ ನಿರ್ದೇಶಕರ ಆದೇಶ ಹಾಗೂ ಉಡುಪಿ ಜಿಪಂ ಸಿಇಓ ನಿರ್ದೇಶನದ ಮೇರೆಗೆ ಆತ್ರಾಡಿ, ಪೆರ್ಡೂರು, ನೀರೆ, ಬೈಲೂರು, ಬೊಮ್ಮಾರಬೆಟ್ಟು ಗ್ರಾಪಂ ವಾಚನಾಲಯಕ್ಕೆ 5ನೇ, 6ನೇ, 7ನೇ ತರಗತಿ ಹಾಗೂ 8-10ನೆಯ ತರಗತಿಯ ಪುಸ್ತಕಗನ್ನು ಮಂಗಳವಾರ ನೀಡಲಾಯಿತು.

ಈ ಪುಸ್ತಕಗಳನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಆಯಾ ಗ್ರಾಪಂಗಳಲ್ಲಿ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಓ, ಕಾರ್ಯದರ್ಶಿ, ಗ್ರಂಥಪಾಲಕರಿಗೆ ಹಸ್ತಾಂತರಿಸಿದರು.

ಓದುವ ಹವ್ಯಾಸವನ್ನು 1-10ನೇ ತರಗತಿಗಳಲ್ಲಿ ಕಲಿಯುವ ಮಕ್ಕಳಲ್ಲಿ ಬೆಳೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಗ್ರಂಥಾಲಯಗಳಲ್ಲಿ ಪಠ್ಯಪುಸ್ತಕಗಳೂ ಲಭ್ಯವಿದ್ದರೆ ಮಕ್ಕಳು ತಮ್ಮ ತರಗತಿಗೆ ಅನುಗುಣವಾಗಿ ಓದಬಹುದಾಗಿದೆ. ಗ್ರಾಮದ ಯುವಕರು ಇತರೆ ಪುಸ್ತಕ ಪತ್ರಿಕೆ ದಿನಪತ್ರಿಕೆ ಓದುವುದರ ಜೊತೆಗೆ ಈಗಿನ ಪಠ್ಯಕ್ಕೆ ಹಚ್ಚಿರುವ ಪುಸ್ತಕಗಳನ್ನು ನೋಡಿ ಓದಿ ತಮ್ಮ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಹಾಯಕ ವಾಗಲಿವೆ ಎಂದು ಎನ್.ಎಚ್.ನಾಗೂರ ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಜಾಹ್ನವಿ ಸಿ., ಸ್ಥಳೀಯ ಪ್ರಾಥಮಿಕ, ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News