`ಪಡುಬಿದ್ರೆ'ಯಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲು ಆದ್ಯತೆ ಮೇಲೆ ಕ್ರಮ: ಸಚಿವ ಆರಗ ಜ್ಞಾನೇಂದ್ರ

Update: 2021-09-21 16:32 GMT

ಬೆಂಗಳೂರು, ಸೆ. 21: `ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಅಗ್ನಿಶಾಮಕ ಠಾಣೆಯನ್ನು ಆರಂಭಿಸಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಲಾಲಾಜಿ ಆರ್. ಮೆಂಡನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ 2021-22ನೆ ಸಾಲಿನಿಂದ 2024-25ನೆ ಸಾಲಿನ ವರೆಗೆ ಕೆ-ಸೇಫ್-2 ಯೋಜನೆಯನ್ನು ರೂಪಿಸಿದ್ದು, ಕಾಪು ತಾಲೂಕಿನಲ್ಲಿ ಪಡುಬಿದ್ರೆಯಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಲು ಮೇಲ್ಕಂಡ ಯೋಜನೆಯಲ್ಲಿ ಪರಿಗಣಿಸಲಾಗಿದೆ ಎಂದರು.

ಪ್ರಸ್ತುತ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ನಂದಿಕೂರು ಕೈಗಾರಿಕಾ ಪ್ರದೇಶದಿಂದ ಉಡುಪಿ ಅಗ್ನಿಶಾಮಕ ಠಾಣೆಯಿಂದ 28 ಕಿ.ಮೀ, ಮಲ್ಪೆ ಅಗ್ನಿಶಾಮಕ ಠಾಣೆಯಿಂದ 34 ಕಿ.ಮೀ ಹಾಗೂ ಕದ್ರಿ ಅಗ್ನಿಶಾಮಕ ಠಾಣೆಯಿಂದ 34 ಕಿ.ಮೀ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮರ್ಥವಾಗಿ ಅಗ್ನಿ ಅನಾಹುತಗಳನ್ನು ನಂದಿಸುವ ಕಾರ್ಯ ನಿರ್ವಹಿಸುತ್ತಿವೆ. ಆದರೂ, ಈ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ಅಗತ್ಯವಿದ್ದು, ಆದ್ಯತೆ ಮೇಲೆ ಒದಗಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News