ಕೃಷಿ ಕಾಯ್ದೆ ವಿರುದ್ಧ ಹೋರಾಡುತ್ತಿರುವವರು ನಕಲಿ ರೈತರು ಎಂದ ಯಕ್ಷಗಾನ ಕಲಾವಿದರು

Update: 2021-09-21 17:00 GMT

ಮಂಗಳೂರು, ಸೆ. 21: ಯಕ್ಷಗಾನ ರಂಗದ ವೇದಿಕೆಯಲ್ಲಿ ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು 'ನಕಲಿ ಹೋರಾಟ' ಎಂದು ಅಪಹಾಸ್ಯ ಮಾಡಿರುವ ಯಕ್ಷಗಾನದ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ರೈತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಕರಾವಳಿಯ ಯಕ್ಷಗಾನ ವೃತ್ತಿ ಕಲಾವಿದರನ್ನೊಳಗೊಂಡ ಮುಲ್ಕಿಯ ಶ್ರೀ ಬಪ್ಪನಾಡು ದುರ್ಗಾ ಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇದರ ಫಲಕ ಹೊಂದಿರುವ ಯಕ್ಷಗಾನ ರಂಗದ ವೇದಿಕೆಯಲ್ಲಿ ಈ ಪ್ರಸಂಗ ನಡೆದಿದೆ ಎನ್ನಲಾಗಿದೆ.

ಯಕ್ಷಗಾನ ರಂಗದ ವೇದಿಕೆಯಲ್ಲಿ ಮೂವರು ಕಲಾವಿದರ ನಡುವಿನ ತುಳು ಸಂಭಾಷಣೆಯ ವೇಳೆ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ಬೆಂಬಲಿಸಿ ಮಾತನಾಡುತ್ತಾ, ಹಲವಾರು ತಿಂಗಳುಗಳಿಂದ ಹಸಿರು ಶಾಲು, ಟೋಫಿ ಧರಿಸಿ ಹೋರಾಟ ಮಾಡುತ್ತಿರುವವರು ನಿಜವಾದ ರೈತರಲ್ಲ, ನಕಲಿಗಳು ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದ ಕೃಷಿ ಕಾಯ್ದೆಯಿಂದ ರೈತರ ನಡುವೆ ದಲ್ಲಾಳಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ರೈತ ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಆದರೆ ಇದರ ವಿರುದ್ಧ ನಿಜವಾದ ರೈತರು ಯಾರೂ ರಸ್ತೆಯಲ್ಲಿ ಕುಳಿತಿಲ್ಲ ಎಂದು ಟೀಕಿಸಿದ್ದಾರೆ.

ರೈತ ರಸ್ತೆಯಲ್ಲಿ ಕುಳಿತಿದ್ದರೆ ನಮಗೆ ಅಕ್ಕಿ ಎಲ್ಲಿಂದ ಸಿಗುತ್ತಿತ್ತು ? ನಿಜವಾದ ರೈತರು ಇನ್ನೂ ಗದ್ದೆಯಲ್ಲೇ ಇದ್ದಾರೆ. ಹಸಿರು ಶಾಲು ಹಾಕಿಕೊಂಡಿರುವ ಕೆಲವು ನಕಲಿ ರೈತರು ರಸ್ತೆಯಲ್ಲಿ ಸಾಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಈಗ ಕೇಂದ್ರದಲ್ಲಿ ಸರಕಾರ ನಡೆಸುತ್ತಿರುವುದು ತಂತಿಯಲ್ಲಿ ನಡೆಯುವ ಮಂಗನಂತಹ ವ್ಯಕ್ತಿಯಲ್ಲ, ಬದಲಿಗೆ ಸಿಂಹದಂತಹ ವ್ಯಕ್ತಿ. ನೀವು ಆರು ತಿಂಗಳಲ್ಲ, ಆರು ವರ್ಷ ಹೋರಾಟ ನಡೆಸಿದರೂ ಪ್ರಯೋಜನವಾಗದು ಎಂದು ರೈತರನ್ನು ಅಪಹಾಸ್ಯ ಮಾಡಿರುವುದು ವೈರಲ್ ವೀಡಿಯೋದಲ್ಲಿದೆ.

ಖಂಡನೆ: ಯಕ್ಷಗಾನದಲ್ಲಿ ಕೇಂದ್ರ ಸರಕಾರವನ್ನು ಹೊಗಳುವ, ಬಿಜೆಪಿಯನ್ನು ಬೆಂಬಲಿಸುವ ರಾಜಕೀಯ ಪ್ರೇರಿತ ಹೇಳಿಕೆಗಳ ಬಗ್ಗೆ ರೈತ ಸಂಘದ ಮುಖಂಡರು ಖಂಡನೆ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕ ಪ್ರಾದೇಶಿಕ ರೈತ ಸಂಘ

ರೈತ ಚಳವಳಿಯ ಬಗ್ಗೆ ಸಂಘ ಪರಿವಾರ ನಡೆಸುತ್ತಿರುವ ಅಪಪ್ರಚಾರಕ್ಕೆ ಕರಾವಳಿಯ ಯಕ್ಷಗಾನ ಕಲೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ. ಚಳವಳಿಯಲ್ಲಿ ತೊಡಗಿಸಿಕೊಂಡ ರೈತರ ಬಗ್ಗೆ ಜನರಿಗೆ ತಪ್ಪುಸಂದೇಶ ನೀಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಪ್ರಾಂತ ಪ್ರದೇಶ ರೈತ ಸಂಘದ ಉಪಾಧ್ಯಕ್ಷ ಯಾದವ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ರೈತ ಸಂಘ

ಯಕ್ಷಗಾನ ಗ್ರಾಮೀಣ ಜನರ ನಡುವಿನ ಒಂದು ಗಂಡೆದೆಯ ಕಲೆ. ಈ ಕಲೆಯ ಬಗ್ಗೆ ನಮಗೆ ಗೌರವ ಇದೆ. ಆದರೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದವರು, ಜೀವನಾನುಭವ ಇಲ್ಲದವರು ಕಲೆಯ ಮೂಲಕ ನಮ್ಮ ಚಳವಳಿಯನ್ನು ಗೇಲಿ ಮಾಡಲು ಬಳಕೆ ಮಾಡುತ್ತಿರುವುದು ನಮಗೆ ನೋವನ್ನುಂಟು ಮಾಡಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಬೇಸರ ವ್ಯಕ್ತಪಡಿಸಿದ್ದಾರೆ.

ರೈತರ ಚಳವಳಿಯನ್ನು ಅವಹೇಳನ ಮಾಡುವ ಉದ್ದೇಶ ಇರಲಿಲ್ಲ

ಈ ವೈರಲ್ ವೀಡಿಯೋ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿರುವ ಕಲಾವಿದ ದಿನೇಶ್ ಕೋಡಪದವು , ಯಾವುದೇ ರಾಜಕೀಯ ಉದ್ದೇಶದಿಂದ ಅಥವಾ ಯಾರನ್ನಾದರೂ ನೋಯಿಸುವ ಉದ್ದೇಶದಿಂದ ನಾನು ಯಕ್ಷಗಾನದಲ್ಲಿ ಆ ರೀತಿಯ ಹೇಳಿಕೆ ನೀಡಿಲ್ಲ. ನಾನು ಕಲಾವಿದನಾಗಿ ಸಾಂದರ್ಭಿಕವಾಗಿ ನನ್ನ ಸಹ ಕಲಾವಿದನ ಜೊತೆ ಸಂಭಾಷಣೆ ನಡೆಸಿದ್ದೇನೆ. ರೈತರನ್ನಾಗಲಿ ರೈತರ ಚಳವಳಿಯನ್ನಾಗಲಿ ಅವಹೇಳನ ಮಾಡುವ ಉದ್ದೇಶ ನನ್ನಲ್ಲಿರಲಿಲ್ಲ ಎಂದಿದ್ದಾರೆ.

ನಾವು ಸುಮಾರು 2 ಸಾವಿರ ಮಂದಿ ಯಕ್ಷಗಾನ ಕಲಾವಿದರು ಈ ಬಾರಿ ಸಂಕಷ್ಟದಲ್ಲಿದ್ದೇವೆ. ನಮಗೆ ನಿಮ್ಮ ರೈತರಿಂದ, ಮಾಧ್ಯಮದವರಿಂದ ಕಿಟ್ ನೀಡಿದರೆ ಒಳ್ಳೆದಿತ್ತು. ನನ್ನ ಹೇಳಿಕೆಯಿಂದ 'ಅಸಲಿ' ರೈತರಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಅವರು ನಮ್ಮ ಅನ್ನದಾತರು ಎಂದು ವಿವಾದಿತ ಯಕ್ಷಗಾನ ಪ್ರಸಂಗದಲ್ಲಿ ನಟಿಸಿದ ದಿನೇಶ್ ಕೋಡಪದವು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News