×
Ad

ಲಕ್ಷದ್ವೀಪ ಆಡಳಿತದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ ಪಿಐಎಲ್ ವಜಾಗೊಳಿಸಿದ ಕೇರಳ ಹೈಕೋರ್ಟ್

Update: 2021-09-22 13:35 IST
Photo: PTI

ತಿರುವನಂತಪುರಂ: ಲಕ್ಷದ್ವೀಪದ ಆಡಳಿತವು ತನ್ನ ಮೇ 21ರ ಆದೇಶಾನುಸಾರ ಅಲ್ಲಿನ ಪಶುಸಂಗೋಪಲಾನ ಇಲಾಖೆ ನಡೆಸುವ ಎಲ್ಲಾ ಡೈರಿ ಫಾರ್ಮ್‍ಗಳನ್ನು ಮುಚ್ಚಲು ಹಾಗೂ ಶಾಲೆಗಳ ಮಧ್ಯಾಹ್ನದೂಟದ ಮೆನುವಿನಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಿದ ಕ್ರಮವನ್ನು ಪ್ರಶ್ನಿಸಿ ಹಾಗೂ ಆದೇಶವನ್ನು ರದ್ದುಗೊಳಿಸಲು ಕೋರಿ ಲಕ್ಷದ್ವೀಪ ಬಾರ್ ಅಸೋಸಿಯೇಷನ್ ಸದಸ್ಯ ಹಾಗೂ ವಕೀಲ ಅಜ್ಮಲ್ ಅಹ್ಮದ್ ಆರ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಕೇರಳ ಹೈಕೋರ್ಟ್ ತಳ್ಳಿ ಹಾಕಿದೆ ಎಂದು livelaw.in ವರದಿ ಮಾಡಿದೆ.

ಲಕ್ಷದ್ವೀಪ ಆಡಳಿತದ ಆದೇಶ ಕಾನೂನುಬಾಹಿರವಾಗಿದೆ ಎಂಬುದಕ್ಕೆ ಅರ್ಜಿದಾರರು ಯಾವುದೇ ಪುರಾವೆಯೊದಗಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಡೈರಿ ಫಾರ್ಮ್‍ಗಳನ್ನು ಬಂದ್ ಮಾಡುವ ನಿರ್ಧಾರದ ಹಿಂದೆ ಆರ್ಥಿಕ ಕಾರಣಗಳಿವೆ ಆದರೆ ಮಧ್ಯಾಹ್ನದೂಟದ ಮೆನುವಿನ ಮಾಂಸಾಹಾರವನ್ನು ತೆಗೆಯಲಾಗಿದೆಯಾದರೂ ಅದರ ಬದಲು ಹಣ್ಣುಗಳು ಹಾಗೂ ಒಣಹಣ್ಣುಗಳನ್ನು ಸೇರಿಸಿರುವುದರಿಂದ ಮಕ್ಕಳಿಗೆ ಅಗತ್ಯವಿರುವ ಪೋಷಕಾಂಶಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಹಾಗೂ ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ಪೀಠ ಹೇಳಿದೆ.

ಲಕ್ಷದ್ವೀಪದ ಜನರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಹಾಗೂ ಅಲ್ಲಿನ ಸಂಸ್ಕøತಿ ಮತ್ತು ಪದ್ಧತಿಗೆ ವಿರುದ್ಧವಾಗಿ ಆಡಳಿತ ಏಕಪಕ್ಷೀಯ ನಿರ್ಧಾರ ಕೈಗೊಂಡಿತ್ತು ಎಂದು ಅರ್ಜಿದಾರರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News