ಕೋವಿಶೀಲ್ಡ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದ ಇಂಗ್ಲೆಂಡ್

Update: 2021-09-22 09:20 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಭಾರತವು ಪ್ರತಿ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದ ನಂತರ ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿತ ಲಸಿಕೆ ಎಂದು ಪರಿಗಣಿಸಲು ಇಂಗ್ಲೆಂಡ್ ತನ್ನ ಪ್ರಯಾಣ ನೀತಿಯನ್ನು ಪರಿಷ್ಕರಿಸಿದೆ. ಆದರೆ ಎರಡೂ ಡೋಸ್ ಲಸಿಕೆ ಪಡೆದ ಭಾರತೀಯರು ಈಗಲೂ ಇಂಗ್ಲೆಂಡ್ ಪ್ರವೇಶಿಸಿದನಂತರ ಕಡ್ಡಾಯವಾಗಿ ಕ್ವಾರಂಟೈನಿಗೊಳಗಾಗಬೇಕು ಎಂದು ಹೇಳಿದೆ. ಅಷ್ಟೇ ಅಲ್ಲದೆ ಇಂಗ್ಲೆಂಡ್ ಮಾನ್ಯತೆ ನೀಡಿರುವ ವಿವಿಧ ದೇಶಗಳ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ. ಜತೆಗೆ ಸಮಸ್ಯೆಯಿರುವುದು ಕೋವಿಶೀಲ್ಡ್ ಲಸಿಕೆ ಕುರಿತಲ್ಲ, ಬದಲು ಭಾರತದ ಲಸಿಕೆ ಪ್ರಮಾಣಪತ್ರದ ಕುರಿತಾಗಿದೆ ಎಂದು ಇಂಗ್ಲೆಂಡ್ ಹೇಳಿದೆ ಎಂದು ndtv.com ವರದಿ ಮಾಡಿದೆ.

"ನಾಲ್ಕು ಪಟ್ಟಿ ಮಾಡಿದ ಲಸಿಕೆಗಳಾದ ಆಸ್ಟಾಝೆನೆಕಾ ಕೋವಿಶೀಲ್ಡ್, ಆಸ್ಟ್ರಾಝೆನೆಕಾ ವ್ಯಾಕ್ಸ್‍ಝೆವ್ರಿಯಾ ಮತ್ತು ಮಾಡರ್ನ್ ಟಕೆಡಾ ಈಗ ಅನುಮೋದಿತ ಲಸಿಕೆಗಳಾಗಿ ಅರ್ಹತೆ ಪಡೆದಿವೆ,'' ಎಂದು ಇಂಗ್ಲೆಂಡ್‍ನ ಪರಿಷ್ಕೃತ ಮಾರ್ಗಸೂಚಿಗಳು ತಿಳಿಸುತ್ತವೆ.

ಭಾರತದ ಲಸಿಕಾ ಪ್ರಮಾಣಪತ್ರದ ಕುರಿತ ಸಂಶಯಗಳಿಂದ ಸಮಸ್ಯೆಯಾಗಿದೆ, ಈ ಕುರಿತು  ಮಾತುಕತೆಗಳನ್ನು ನಡೆಸಲಾಗುವುದು ಎಂದು ಇಂಗ್ಲೆಂಡ್ ಹೇಳಿದೆ. ಭಾರತದಲ್ಲಿ ಲಸಿಕೆ ಪ್ರಮಾಣಪತ್ರಗಳನ್ನು ಕೇಂದ್ರೀಕೃತ ವ್ಯವಸ್ಥೆ ಮೂಲಕ ಕೋವಿನ್ ಆ್ಯಪ್ ಮತ್ತು ವೆಬ್ ತಾಣದ ಮೂಲಕ ನೀಡಲಾಗುತ್ತಿದೆ.

"ಇಂಗ್ಲೆಂಡ್‍ನ ಪರಿಷ್ಕೃತ ನಿಯಮಗಳ ಪ್ರಕಾರ ಅಕ್ಟೋಬರ್ 4ರಂದು ಬೆಳಿಗ್ಗೆ 4 ಗಂಟೆಯಿಂದ ಆರಂಭಗೊಂಡಂತೆ ಕೆಲ ದೇಶಗಳ ಸಂಬಂಧಪಟ್ಟ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಲಸಿಕೆ ಪಡೆದವರನ್ನು ಸಂಪೂರ್ಣವಾಗಿ ಲಸಿಕೆ ಪಡೆದವರೆಂದು ಪರಿಗಣಿಸಲಾಗುವುದು.'' ಆದರೆ ಈ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ.

ಇದರ ಕಾರಣದಿಂದ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದ ಭಾರತೀಯರು ಈಗಲೂ ಇಂಗ್ಲೆಂಡ್‍ಗೆ ತೆರಳಿದಾಗ ಕ್ವಾರಂಟೈನಿಗೊಳಗಾಗಬೇಕಿದೆ.

ಆದರೆ ಪ್ರಮಾಣಪತ್ರ ಕುರಿತಂತೆ ಕೋವಿನ್‍ನಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್ ಎಸ್ ಶರ್ಮ ಹೇಳಿದ್ದಾರೆ.

"ಈ ವ್ಯವಸ್ಥೆ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಂತೆಯೇ ಇದೆ. ಇಂಗ್ಲೆಂಡ್‍ಗೆ ಕೋವಿನ್ ಕುರಿತಾದ ತಾಂತ್ರಿಕ ವಿಚಾರಗಳ ಕುರಿತು ತಿಳಿಯಬೇಕಿದೆ, ಈಗಾಗಲೇ ಅವರಿಗೆ ಅಗತ್ಯ ಸಂಪನ್ಮೂಲ ಒದಗಿಸಲಾಗಿದೆ ಎರಡು ಬಾರಿ ಮಾತುಕೆಗಳೂ ತಾಂತ್ರಿಕ ಮಟ್ಟದಲ್ಲಿ ನಡೆದಿದೆ,'' ಎಂದು ಶರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News