​ಗುರುವಾರ ಹಗಲು ಆಕಾಶದಲ್ಲಿ ಸಂಭವಿಸಲಿದೆ ‘ಶರದ್ವಿಷುವ’ ವಿದ್ಯಾಮಾನ

Update: 2021-09-22 13:30 GMT

ಉಡುಪಿ, ಸೆ.22: ಖಗೋಳ ವಿದ್ಯಮಾನಗಳು ಕೇವಲ ರಾತ್ರಿ ಆಕಾಶಕ್ಕೆ ಮಾತ್ರ ಸೀಮಿತವಲ್ಲ. ಕೆಲವೊಂದು ವಿದ್ಯಮಾನಗಳನ್ನು ಹಗಲಿನ ವೇಳೆಯಲ್ಲಿ ಕೂಡಾ ನೋಡಿ ಆನಂದಿಸಬಹುದು. ಅಂತಹ ಒಂದು ವಿಶೇಷ ವಿದ್ಯಮಾನ ‘ಶರದ್ವಿಷುವ’. ಪ್ರತಿ ವರ್ಷ ನಡೆಯುವ ಈ ವಿದ್ಯಾಮಾನ ಸೆ.23(ಗುರುವಾರ) ರಂದು ನಡು ಹಗಲು ಸಂಭವಿಸಲಿದೆ.

ವಿಷುವತ್ ಸಂಕ್ರಾಂತಿ ಒಂದು ವಿಶೇಷ ಖಗೋಳ ವಿದ್ಯಮಾನವಾಗಿದ್ದು, ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ವಿದ್ಯಮಾನ ಪ್ರತಿ ವರ್ಷ ಸಂಭವಿಸುತ್ತದೆ.

ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ ಮತ್ತು ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ. ಶರದ್ವಿಷುವ ಸಂಕ್ರಾಂತಿಯ ದಿನದಂದು, ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ, ಉತ್ತರ ಗೋಳಾರ್ಧದಲ್ಲಿ ಶರತ್ ಋತು ಆರಂಭವಾಗುತ್ತದೆ.

ಅಲ್ಲದೆ, ಈ ದಿನ ಸೂರ್ಯನ ಕೇಂದ್ರ ಬಿಂದುವು ದಿಗಂತದ ಮೇಲೆ 12 ಗಂಟೆಗಳ ಕಾಲ ಮತ್ತು ದಿಗಂತದ ಕೆಳಗೆ 12 ಗಂಟೆಗಳ ಕಾಲ ಇರುತ್ತದೆ. ಆದರೆ ವಿಷುವತ್ ಸಂಕ್ರಾತಿಯ ದಿನದಂದು ಸಮಭಾಜಕ ವೃತ್ತದಲ್ಲಿ ಹಗಲು ಹಾಗೂ ರಾತ್ರಿಯ ಸಮಯವು ಸಮಾನವಾಗಿರುವುದಿಲ್ಲ. ಹಗಲಿನ ಅವಧಿಯು ರಾತ್ರಿಯ ಸಮಯಕ್ಕಿಂತ ಸ್ವಲ್ಪ ದೀರ್ಘವಾಗಿರುತ್ತದೆ. ಏಕೆಂದರೆ, ದಿನದ ಅವಧಿಯು, ಸೂರ್ಯನ ವೃತ್ತದ ಮೇಲ್ತುದಿಯ ಉದಯ ಹಾಗೂ ಅಸ್ತದ ನಡುವಿನ ಅವಧಿಯಾಗಿರುತ್ತದೆ.

ವಿಷುವತ್ ದಿನವನ್ನು ಉಪಯೋಗಿಸಿಕೊಂಡು, ನಾವಿರುವ ಸ್ಥಳದ ಅಕ್ಷಾಂಶ ವನ್ನು ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ವಿದ್ಯಾರ್ಥಿಗಳು ಸುಲಭವಾಗಿ ಮಾಡಬಹುದಾಗಿದೆ.

ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರವನ್ನು ಹೊಂದಿರುವ ವಸ್ತುವನ್ನು ನೆಲದ ಮೇಲೆ ನೇರವಾಗಿ ಇರಿಸಿ. ಆ ವಸ್ತುವಿನ (ಉದಾ: ಮೇಣದ ಬತ್ತಿ) ಅತೀ ಸಣ್ಣ ನೆರಳಿನ ಉದ್ದವನ್ನು ಅಳೆಯುವ ಮೂಲಕ ನಮ್ಮ ನೆರಳನ್ನೂ ಅಳೆಯ ಬಹುದು. ವಸ್ತು ಹಾಗೂ ಅದರ ನೆರಳಿನಿಂದ ಉಂಟಾಗುವ ಲಂಬಕೋನ ತ್ರಿಭುಜದಲ್ಲಿ, ವಸ್ತುವು ತ್ರಿಭುಜದ ಅಡಿಪಾಯ ಎಂದು ಪರಿಗಣಿಸಿದರೆ, ಅದರ ನೆರಳು ತ್ರಿಭುಜದ ಅಭಿಮುಖ ಬಾಹು ಆಗಿರುತ್ತದೆ. ಈ ಎರಡು ಬಾಹು ಗಳಿಂದಾದ ಕೋನವು, ಸ್ಥಳದ ಅಕ್ಷಾಂಶವನ್ನು ಹೇಳುತ್ತದೆ.

ಖಗೋಳ ಸಮಭಾಜಕವೃತ್ತವನ್ನು (ವಿಷುವದ್ವತ್ತ ) ಕ್ರಾಂತಿವೃತ್ತವು ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ಬಿಂದುಗಳು. ಈ ಬಿಂದುವನ್ನು ಈಶಾದಿ ಬಿಂದು ಎಂದು ಕರೆಯುತ್ತಾರೆ. ಭೂಮಿಯ ಅಕ್ಷದ ಅಪ್ರದಕ್ಷಿಣೆಯಿಂದಾಗಿ, ಈಗ ಈ ಬಿಂದುವು ಕನ್ಯಾ ನಕ್ಷತ್ರಪುಂಜವನ್ನು ತಲುಪಿದೆ. ಸೂರ್ಯನು ಈಶಾದಿ ಬಿಂದುವನ್ನು ಸಂಕ್ರಮಿಸಿ, ಪ್ರತಿ ದಿನ ಆಕಾಶದಲ್ಲಿ ದಕ್ಷಿಣದ ಕಡೆ ಚಲಿಸುವುದನ್ನು ನೋಡಬಹುದು.

ವಿಶ್ವಾದ್ಯಂತ ವಿಷುವತ್ ಸಂಕ್ರಾಂತಿಯನ್ನು ಸೆಪ್ಟೆಂಬರ್ ಈಕ್ವಿನಾಕ್ಸ್ ಎಂದು ಕರೆಯುತ್ತಾರೆ. ಭೂಗೋಳಾರ್ಧದ ಮೇಲ್ಭಾಗದವರು ಈ ದಿನವನ್ನು ಆಟಂನಲ್ ಈಕ್ವಿನಾಕ್ಸ್ ಎಂದು ಕೂಡ ಕರೆಯುತ್ತಾರೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News