ಅಲ್ಝೀಮರ್ಸ್ ನಿಂದ ಬಳಲುವ ಪೋಷಕರನ್ನು ಮಕ್ಕಳಂತೆ ಪೋಷಿಸಿ: ಡಿಸಿಪಿ ಹರಿರಾಮ್ ಶಂಕರ್

Update: 2021-09-22 13:43 GMT

ಮಂಗಳೂರು, ಸೆ.22:ಅಲ್ಝೀಮರ್ಸ್ ರೋಗದಿಂದ ಬಳಲುವ ಪೋಷಕರು ನಿಮಗಿದ್ದರೆ, ಅವರನ್ನು ಕೂಡ ನಿಮ್ಮ ಮಕ್ಕಳಂತೆ ಪೋಷಿಸಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರೇಟ್‌ನ ಕಾನೂನು-ಸುವ್ಯವಸ್ಥೆಯ ಡಿಸಿಪಿ ಹರಿರಾಮ್ ಶಂಕರ್ ಸಲಹೆ ನೀಡಿದ್ದಾರೆ.

ನಗರದ ಕದ್ರಿ ಉದ್ಯಾನವನದಲ್ಲಿ ಪೇಜ್ (ಪೀಪಲ್ಸ್ ಅಸೋಸಿಯೇಶನ್ ಫಾರ್ ಜರಿಟ್ರಿಕ್ ಎಂಪವರ್‌ಮೆಂಟ್) ಸಂಸ್ಥೆಯಿಂದ ಹಮ್ಮಿಕೊಳ್ಳಲಾದವಿಶ್ವ ಅಲ್ಝೀಮರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಲ್ಝೀಮರ್ಸ್ ಕಾಯಿಲೆ ಇದ್ದವರನ್ನು ಪೋಷಿಸುವುದು ಕೂಡ ಒಂದು ಚಾಲೆಂಜ್‌ ಆಗಿದೆ. ಇಲ್ಲಿ ತಾಳ್ಮೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮಕ್ಕಳು ತಪ್ಪು ಮಾಡಿದರೆ ಹೇಗೆ ಕ್ಷಮಿಸುತ್ತೆವೆಯೋ ಹಾಗೆಯೇ ತಂದೆ-ತಾಯಿ, ಅತ್ತೆ-ಮಾವ ಅಲ್ಝೀಮರ್ಸ್ ನಿಂದ ಬಳಲುವ ಸಂದರ್ಭ ಅವರು ಕೂಡ ಮಕ್ಕಳಂತೆ ವರ್ತಿಸುತ್ತಾರೆ. ಯಾವುದೇ ಕಾರಣಕ್ಕೂ ಅವರ ಮೇಲೆ ಕೋಪ ಪ್ರದರ್ಶಿಸದೇ ಹೃದಯವೈಶಾಲ್ಯತೆ ಮೆರೆಯಬೇಕು ಎಂದು ಹೇಳಿದರು.

ನನ್ನ ಅಜ್ಜಿಯೂ ಕೂಡ ಇದೇ ಅಲ್ಝೀಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ನನ್ನ ತಾಯಿ ಆಯುರ್ವೇದ ವೈದ್ಯೆಯಾಗಿದ್ದರಿಂದ ತನ್ನ ವೃತ್ತಿಪರ ಕರ್ತವ್ಯ ನಿರ್ವಹಿಸುತ್ತಲೇ ಅಜ್ಜಿಯ ಸೇವೆ ಮಾಡುತ್ತಿದ್ದರು. ಈ ವೇಳೆ ಕುಟುಂಬಸ್ಥರು ಬೇರೆ ಕಡೆ ಮದುವೆ ಕಾರ್ಯಕ್ರಮಗಳಿದ್ದರೆ ಅದು ಕೂಡ ಒಂದು ದಿನದ ಮಟ್ಟಿಗೆ ಇದ್ದರೆ ಮಾತ್ರ ತೆರಳುತ್ತಿದ್ದೆವು. ಅದಕ್ಕೂ ಹೆಚ್ಚಿನ ದಿನಗಳು ತಗುತ್ತದೆ ಎಂದರೆ ಸಮಸ್ಯೆಯಾಗುತ್ತಿತ್ತು. ಫ್ಯಾಮಿಲಿ ಟ್ರಿಪ್‌ಗಳಂತೂ ಮಾಡಿಯೇ ಇಲ್ಲ. ಈ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಿನ ಕಾಳಜಿ ತೋರಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಅವಘಡಗಳೇ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದರು.

ಕೆಲವೊಂದು ಸಾರಿ ಅಜ್ಜಿ ಸ್ಟೆಪ್ ಮೇಲೆ ಹೋಗಿ ಅಲ್ಲಿಂದ ಹಾರುವ ವಿಫಲ ಯತ್ನ ನಡೆಸಿದ್ದರು. ಆಗಿನಿಂದ ಇನ್ನೂ ಹೆಚ್ಚಿನ ನಿಗಾವಣೆ ವಹಿಸಿದ್ದೆವು. ಅಲ್ಝೀಮರ್ಸ್ ರೋಗಿಗಳ ಬಗ್ಗೆ ತೀರಾ ಹತ್ತಿರದಿಂದ ಕಂಡಿದ್ದೇನೆ. ಈ ಅಲ್ಝೀಮರ್ಸ್ ದಿನವು ಅಂತಹವರಿಗೆ ಸೇವೆ ನೀಡುವವ ಕರ್ತವ್ಯವನ್ನು ನೆನಪಿಸುವ ದಿನವಾಗಿದೆ ಎಂದರು.

43 ಪಾರ್ಕ್ ನಿರ್ಮಾಣ: ಮಂಗಳೂರಿನಿಲ್ಲಿ ಪ್ರಶಸ್ತವಾದ ಪಾರ್ಕ್ ಇದ್ದರೆ ಅದು ಕದ್ರಿ ಉದ್ಯಾನವನ ಮಾತ್ರ. ಈಗಾಗಲೇ ಮಂಗಳೂರು ವ್ಯಾಪ್ತಿಯಲ್ಲಿ ವಿವಿಧೆಡೆ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಈಗಾಗಲೇ ಸುಮರು 43 ಕಡೆಗಳಲ್ಲಿ ಜಾಗ ಗುರುತಿಸುವ ಕಾರ್ಯ ನಡೆದಿದ್ದು, ಯೋಜನೆ ಪ್ರಗತಿಯಲ್ಲಿದೆ. ಇಂತಹ ಹಲವು ಚಾಲೆಂಜ್‌ಗಳನ್ನು ಸರಕಾರ ಕೈಗೊಂಡಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು ತಿಳಿಸಿದ್ದಾರೆ.

ಪಾರ್ಕ್‌ಗಳಿದ್ದರೆ ನಗರದ ಸೌಂದರ್ಯ ಇನ್ನಷ್ಟು ಇಮ್ಮಡಿಗೊಳ್ಳುತ್ತದೆ. ಸಂಜೆ, ಬೆಳಗ್ಗಿನ ಸಮಯದಲ್ಲಿ ಹಿರಿಯರು ಪಾರ್ಕ್‌ಗಳಿಗೆ ಭೇಟಿ ನೀಡಿ, ಆಹ್ಲಾದಕರ ಅನುಭವ ಪಡೆಯಬಹುದು. ಇದಕ್ಕೆ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮನಪಾ ವ್ಯಾಪ್ತಿಯಲ್ಲಿ ಹಲವು ಯೋಜನೆ, ಸೌಲಭ್ಯಗಳು ಮುಂದಿನ ದಿನಗಳಲ್ಲಿ ಬರಲಿವೆ. ಮ್ಯೂಸಿಕ್ ಥೆರಪಿ ಸಹಿತ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು, ಮೊದಲ ಹಂತದಲ್ಲೇ ಅಲ್ಝೀಮರ್ಸ್ ಪತ್ತೆ ಹಚ್ಚಬೇಕು. ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಸತೀಶ್‌ಕುಮಾರ್ ಭಂಡಾರಿ, ತುಳು ಚಿತ್ರಕಲಾವಿದ ನವೀನ್ ಪಡೀಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳು ಬಲೂನ್‌ಗಳನ್ನುಆಕಾಶದತ್ತ ಹಾರಿಬಿಟ್ಟರು. ಹಿರಿಯರಿಗೆ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ದೂರವಾಣಿ ಸಂಖ್ಯೆ ಸೇರಿದಂತೆ ಸಾಕಷ್ಟು ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಅತಿಥಿಗಳು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಯೆನೆಪೊಯ ಡೀಮ್ಡ್ ವಿವಿಯ ವಿಶ್ರಾಂತ ಪ್ರೊ ವೈಸ್ ಚಾನ್ಸಲರ್ ಡಾ.ಸಿ.ವಿ. ರಘುವೀರ್, ಪೇಜ್ ಸಂಸ್ಥೆಯ ಉಪಾಧ್ಯಕ್ಷೆ ಪ್ರಭಾ ಅಧಿಕಾರಿ ಎಂ.ಆರ್., ಕಾರ್ಯದರ್ಶಿ ಜೆರಾರ್ಡಿನ್ ಡಿಸೋಜ, ಜಂಟಿ ಕಾರ್ಯದರ್ಶಿ ಮೋಹನ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಗೆ ಅಲ್ಝೀಮರ್ಸ್ ದಿನದ ಪ್ರಯುಕ್ತ ಆಯೋಜಿಸಲ್ಪಟ್ಟ ವಿವಿಧ ಚಟುವಟಿಕೆಗಳಲ್ಲಿ ವಿಜಯಿಶಾಲಿಯಾದವರಿಗೆ ಪ್ರಶಸ್ತಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News