ಅಫ್ಘಾನ್‌ಗೆ ವಿಶ್ವಸಂಸ್ಥೆ ತುರ್ತು ನಿಧಿ ಬಿಡುಗಡೆ

Update: 2021-09-22 14:32 GMT

ಜಿನೆವಾ, ಸೆ.22: ತೀವ್ರ ಹದಗೆಟ್ಟಿರುವ ಅಫ್ಗಾನಿಸ್ತಾನದ ಆರೋಗ್ಯ ರಕ್ಷಣಾ ವ್ಯವಸ್ಥೆ ಕುಸಿದುಬೀಳುವುದನ್ನು ತಪ್ಪಿಸಲು 45 ಮಿಲಿಯನ್ ಡಾಲರ್ ತುರ್ತುನಿಧಿ ಬಿಡುಗಡೆಗೊಳಿಸಿರುವುದಾಗಿ ವಿಶ್ವಸಂಸ್ಥೆಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಬುಧವಾರ ಘೋಷಿಸಿದ್ದಾರೆ.  ಈ ನೆರವನ್ನು ವಿಶ್ವಸಂಸ್ಥೆಯ ಆರೋಗ್ಯ ಮತ್ತು ಮಕ್ಕಳ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಅವರು ತಮ್ಮ ಸಹಭಾಗಿ ಎನ್‌ಜಿಒಗಳ ನೆರವಿನಿಂದ ಆಸ್ಪತ್ರೆಗಳು, ಕೋವಿಡ್-19 ಕೇಂದ್ರಗಳು ಹಾಗೂ ಇತರ ಆರೋಗ್ಯ ಕೇಂದ್ರಗಳು ಈ ವರ್ಷಾಂತ್ಯದವರೆಗೆ ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಿದ್ದಾರೆ. ಅಫ್ಘಾನ್ ಜನತೆಯ ಅಗತ್ಯದ ಹೊತ್ತಿನಲ್ಲಿ ವಿಶ್ವಸಂಸ್ಥೆಯು ಅವರೊಂದಿಗೆ ಇರಲಿದೆ ಎಂದು ಗ್ರಿಫಿತ್ ಹೇಳಿದ್ದಾರೆ.

ಅಫ್ಘಾನ್‌ನಲ್ಲಿ ಔಷಧಿಗಳು, ಔಷಧ ಪೂರೈಕೆ ಮತ್ತು ತೈಲದ ತೀವ್ರ ಕೊರತೆ ಎದುರಾಗಿದೆ ಎಂದವರು ಎಚ್ಚರಿಸಿದ್ದಾರೆ.

ಅಫ್ಘಾನ್‌ನಲ್ಲಿ ಕಳೆದ ತಿಂಗಳು ತಾಲಿಬಾನ್ ಆಡಳಿತ ಆರಂಭವಾದಂದಿನಿಂದ ಆರೋಗ್ಯರಕ್ಷಣೆ ವ್ಯವಸ್ಥೆಯಲ್ಲಿ ತೀವ್ರ ಸಮಸ್ಯೆ ಎದುರಾಗಿತ್ತು. ವಿದೇಶಿ ನೆರವು ಪೂರೈಸಲು ಅಡಚಣೆ, ಬಹುತೇಕ ಆರೋಗ್ಯ ಸಂಸ್ಥೆಗಳಲ್ಲಿ ಸಿಬಂದಿಗಳ ಕೊರತೆಯಿಂದ ಸಮಸ್ಯೆ ಕ್ರಮೇಣ ಮತ್ತಷ್ಟು ಬಿಗಡಾಯಿಸಿದೆ. ‘ ದೇಶದಾದ್ಯಂತ ಆರೋಗ್ಯ ಕೇಂದ್ರಗಳ ಸಿಸೇರಿಯನ್ ವಿಭಾಗ, ತೀವ್ರ ನಿಗಾ ಘಟಕಗಳಲ್ಲಿ ಜನತೆಗೆ ಆರೋಗ್ಯ ರಕ್ಷಣ ಸೇವೆಯನ್ನು ನಿರಾಕರಿಸಲಾಗುತ್ತಿದೆ. ದುರಂತವನ್ನು ತಪ್ಪಿಸಲು ಮತ್ತು ಅಫ್ಘಾನ್‌ನ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಬಲ ತುಂಬಲು ವಿಶ್ವಸಂಸ್ಥೆಯ ಕೇಂದ್ರ ತುರ್ತು ಪರಿಹಾರ ನಿಧಿಯಿಂದ 45 ಮಿಲಿಯನ್ ಡಾಲರ್ ಒದಗಿಸಲು ನಿರ್ಧರಿಸಲಾಗಿದೆ ’ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿ ಮತ್ತು ತುರ್ತು ಪರಿಹಾರ ನಿಧಿಯ ಸಂಯೋಜಕ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News