ಭಾರೀ ಪ್ರಮಾಣದ ಡ್ರಗ್ಸ್ ಸಾಗಣೆ, ಅಮೆಝಾನ್ ಲಂಚ ಪ್ರಕರಣ: ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಕಾಂಗ್ರೆಸ್ ಒತ್ತಾಯ

Update: 2021-09-22 14:43 GMT

ಹೊಸದಿಲ್ಲಿ: ಗುಜರಾತ್‌ನಲ್ಲಿ ಭಾರೀ  ಪ್ರಮಾಣದ ಡ್ರಗ್ಸ್ ಸಾಗಣೆ ಹಾಗೂ ಇ-ಕಾಮರ್ಸ್ ಸಂಸ್ಥೆ ಅಮೆಝಾನ್ ಒಳಗೊಂಡ ಲಂಚ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು  ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಈ ‘ಅತ್ಯಂತ ಗಂಭೀರ’ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದೆ.

"ಈ ವಿಚಾರಗಳು ದೇಶದ ಭದ್ರತೆಗೆ ಸಂಬಂಧಿಸಿವೆ ಹಾಗೂ ಈ ಪ್ರಕರಣಗಳಲ್ಲಿ ಭಾಗಿಯಾಗಿರುವವರು ದೇಶದ್ರೋಹಿಗಳು. ಅದಕ್ಕಾಗಿಯೇ ಪ್ರಧಾನಿ ರಾಷ್ಟ್ರಕ್ಕೆ ಉತ್ತರಿಸಬೇಕಾಗುತ್ತದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ  ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದರು.

ಗುಜರಾತ್‌ನ ಕಚ್ ಜಿಲ್ಲೆಯ ಅದಾನಿ ಗ್ರೂಪ್ ಕಾರ್ಯನಿರ್ವಹಿಸುವ ಮುಂಡ್ರಾ ಬಂದರಿನಲ್ಲಿ ಎರಡು ಕಂಟೇನರ್‌ಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ 2,988.21 ಕೆಜಿ ಹೆರಾಯಿನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಘೋಷಿಸಿದ್ದ ಒಂದು ದಿನದ ನಂತರ  ಕಾಂಗ್ರೆಸ್ ನಾಯಕರ ಹೇಳಿಕೆ ಬಂದಿದೆ.

ಅಮೆಝಾನ್ ಪ್ರಕರಣದಲ್ಲಿ, ಇ-ಕಾಮರ್ಸ್ ಕಂಪೆನಿಯು 'ಕಾನೂನು ಶುಲ್ಕ' ರೂಪ ದಲ್ಲಿ 8,546 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಈಗ ತಿಳಿದುಬಂದಿದೆ. ಆದರೆ ಭಾರತದ ಕಾನೂನು ಸಚಿವಾಲಯದ ವಾರ್ಷಿಕ ಬಜೆಟ್ ಕೇವಲ 1,100 ಕೋಟಿ ರೂ.ಆಗಿದೆ. ಮೋದಿ ಸರಕಾರದಲ್ಲಿ ಯಾರಿಗೆ 8,546 ಕೋಟಿ ರೂ. ಲಂಚವನ್ನು ನೀಡಲಾಗುತ್ತಿದೆ? ಯಾರು ಹಣವನ್ನು ಪಡೆದರು? ಈ ಹಣವನ್ನು ಕೋಟ್ಯಂತರ ಸಣ್ಣ ವ್ಯಾಪಾರಿಗಳು, ಎಂಎಸ್‌ಎಂಇಗಳು ಮತ್ತು ವ್ಯಾಪಾರಿಗಳ ವ್ಯವಹಾರವನ್ನು ನಿರ್ಮೂಲನೆ ಮಾಡಲು ನೀಡಲಾಗಿದೆಯೇ? ಎಂದು ಸುರ್ಜೇವಾಲಾ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News