ಇದು ಈಗ ಬೇಕಿತ್ತೇ?

Update: 2021-09-22 17:54 GMT

ಮಾನ್ಯರೇ,

ಕೋವಿಡ್ ಸಂಕಷ್ಟದ ನಡುವೆ ಶಾಸಕ ಮತ್ತು ಮಾಜಿ ಶಾಸಕರ ಮನರಂಜನೆಗಾಗಿ ಕ್ಲಬ್ (‘ಕಾನ್‌ಸ್ಟಿಟ್ಯೂಷನ್ ಕ್ಲಬ್’) ನಿರ್ಮಿಸಲು ಮುಂದಾಗಿರುವ ರಾಜ್ಯ ಸರಕಾರದ ನಿರ್ಧಾರ ಸೂಕ್ತವಲ್ಲ.

ಕೊರೋನ ಬಿಕ್ಕಟ್ಟಿನಿಂದ ಹೊರಬರಲಾಗದೆ ಸಂಕಷ್ಟ ಅನುಭವಿಸುತ್ತಿರುವ ಬಡವರ, ಕೂಲಿಕಾರ್ಮಿಕರ, ಖಾಸಗಿ ನೌಕರರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ. ಅಲ್ಲದೆ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸಿಗಬೇಕಾದ ಪರಿಹಾರ ಧನ ಇನ್ನೂ ತಲುಪಿಲ್ಲ. ರಾಜ್ಯದ ಅದೆಷ್ಟೋ ಸರಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರ ಮಧ್ಯೆ ಕೋವಿಡ್ ಮೂರನೇ ಅಲೆಯ ಭೀತಿ ಎದುರಾಗಿದೆ. ಇಂತಹ ಸವಾಲಿನ ಸಂಕಟದ ದಿನಗಳಲ್ಲಿ ಶಾಸಕರು ತಮ್ಮ ಮೋಜು ಮಸ್ತಿಗಾಗಿ ’ಕ್ಲಬ್’ ರಚನೆ ಮಾಡುವಂತೆ ಒತ್ತಾಯಿಸುವುದು ಅಗತ್ಯವೇ?

ಈಗಾಗಲೇ ಕೆಲಸ ಕಳೆದುಕೊಂಡ ಕಾರ್ಮಿಕ ವರ್ಗ ಊಟ, ವಸತಿ, ಉದ್ಯೋಗಕ್ಕಾಗಿ ಅಲೆಯುವಂತಾಗಿದೆ. ಕೋವಿಡ್ ಸಂಕಷ್ಟದ ದಿನಗಳು ಮಾಸುವ ಮುನ್ನವೇ ಆಡಳಿತ ನಡೆಸುವ ಸರಕಾರಗಳು ಜನರ ಮೇಲೆ ಅಗತ್ಯ ವಸ್ತುಗಳು ಹಾಗೂ ತೈಲ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿವೆ.

ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಜನರಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಹೊಸ ಯೋಜನೆ ರೂಪಿಸಬೇಕಾದ ಮುಖ್ಯಮಂತ್ರಿಗಳು ಶಾಸಕರ ಒತ್ತಡಕ್ಕೆ ಮಣಿದು ಮೋಜಿಗಾಗಿ ಕ್ಲಬ್ ನಿರ್ಮಿಸಲು ಹೊರಟಿರುವುದು ಸರಿಯಲ್ಲ. ಸರಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕಿದೆ.

Writer - -ಬಾಲಾಜಿ ಕುಂಬಾರ, ಚಟ್ನಾಳ

contributor

Editor - -ಬಾಲಾಜಿ ಕುಂಬಾರ, ಚಟ್ನಾಳ

contributor

Similar News