​ಉಗ್ರರ ಜತೆ ಸಂಪರ್ಕ: ಆರು ಸರಕಾರಿ ಉದ್ಯೋಗಿಗಳ ವಜಾ

Update: 2021-09-23 03:47 GMT
ಸಾಂದರ್ಭಿಕ ಚಿತ್ರ (source: PTI)

ಹೊಸದಿಲ್ಲಿ, ಸೆ.23: ಉಗ್ರರ ಜತೆ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿದ್ದ ಆರು ಮಂದಿ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಒಪ್ಪಿಗೆ ನೀಡಿದೆ. ಸಂವಿಧಾನದ 311(2)ನೇ ವಿಧಿ ಅನ್ವಯ ಆರು ಮಂದಿಯನ್ನು ವಜಾಗೊಳಿಸಲಾಗಿದ್ದು, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಇದುವರೆಗೆ ಒಟ್ಟು 24 ಮಂದಿಯನ್ನು ಸೇವೆಯಿಂದ ವಜಾಗೊಳಿಸಿದಂತಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 311(2)(2) ವಿಧಿ ಅಡಿಯಲ್ಲಿ ಪ್ರಕರಣಗಳ ಮೇಲ್ತನಿಖೆ ಮತ್ತು ಶಿಫಾರಸು ಮಾಡಲು ನಿಯೋಜಿಸಿದ ಸಮಿತಿ ಆರು ಮಂದಿ ಸರ್ಕಾರಿ ನೌಕರರನ್ನು ಉಗ್ರಸಂಪರ್ಕ ಮತ್ತು ಅವರ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ವಜಾಗೊಳಿಸಲು ಶಿಫಾರಸು ಮಾಡಿದೆ. ಸದ್ಯವೇ ಇವರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.

ಈಗಾಗಲೇ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ಸಾಗಣೆ ನೆರವು ನೀಡಿದ ಕಾರಣಕ್ಕೆ ಎನ್‌ಐಎ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿರುವ ಒಬ್ಬ ಪೊಲೀಸ್ ಪೇದೆ ಮತ್ತು ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ಕಿರಿಯ ಸಹಾಯಕ ಸೇವೆಯಿಂದ ವಜಾಗೊಂಡವರಲ್ಲಿ ಸೇರಿದ್ದಾರೆ. ಪೊಲೀಸ್ ಪೇದೆ ಕಾರ್ಯನಿರ್ವಹಿಸುತ್ತಿದ್ದ ವಿಧಾನ ಪರಿಷತ್ ಸದಸ್ಯರ ಮನೆಯಿಂದ ಶಸ್ತ್ರಾಸ್ತ್ರ ಲೂಟಿ ಮಾಡಿದ್ದ ಎಂದು ಆಪಾದಿಸಲಾಗಿದೆ. ಮತ್ತೊಬ್ಬ ಶಿಕ್ಷಕ ಸ್ಥಳೀಯವಾಗಿ ಭಯೋತ್ಪಾದಕ ತರಬೇತಿ ಪಡೆದಿದ್ದ ಎನ್ನಲಾಗಿದೆ. ಈತನನ್ನು ಪಿಎಸ್‌ಎ ಅನ್ವಯ ಬಂಧಿಸಲಾಗಿದೆ. ಪೊಲೀಸ್ ದಾಖಲೆಗಳ ಪ್ರಕಾರ ಉಗ್ರರ ಪರ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ವಲಯ ಅಧಿಕಾರಿಯೊಬ್ಬರು, ಸೇವೆಗೆ ಸೇರುವ ಮುನ್ನ ಉಗ್ರಗಾಮಿ ಸಂಘಟನೆಯ ಜಿಲ್ಲಾ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಶಿಕ್ಷಕನನ್ನೂ ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News