ಕೋವಿಡ್ ನಿಂದ ಮೃತಪಟ್ಟ ಮಹಿಳೆಗೂ ಲಸಿಕೆ ಪಡೆದ ಪ್ರಮಾಣ ಪತ್ರ!

Update: 2021-09-23 04:17 GMT
Photo source: Twitter video screenshot

ಭೋಪಾಲ್, ಸೆ.23: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನ ದಾಖಲೆ 2.5 ಕೋಟಿ ಕೋವಿಡ್ ಲಸಿಕೆ ಡೋಸ್ ನೀಡಿದ್ದು ಎಲ್ಲೆಡೆ ವ್ಯಾಪಕ ಪ್ರಚಾರ ಪಡೆದಿತ್ತು. ಮಧ್ಯ ಪ್ರದೇಶ ಸರಕಾರವಂತೂ 27 ಲಕ್ಷ ಡೋಸ್‌ಗಳನ್ನು ವಿತರಿಸಿದ ಅಂಕಿ ಅಂಶ ಮುಂದಿಟ್ಟಿತ್ತು. ಆದರೆ ಮದ್ಯಪ್ರದೇಶದ ಅಂಕಿಅಂಶಗಳಲ್ಲಿ ಹಲವು ಲೋಪಗಳು ಇರುವುದು ಕಂಡುಬಂದಿದೆ. ಇಡೀ ಅಭಿಯಾನಕ್ಕೇ ಮುಜುಗರ ತರುವ ಕೆಲ ನಿದರ್ಶನಗಳೂ ವರದಿಯಾಗಿವೆ.

ಕೋವಿಡ್ ಲಸಿಕೆ ಪಡೆಯದವರಿಗೆ ಕೂಡಾ ಲಸಿಕೆ ಡೊಸ್ ಪಡೆದ ಪ್ರಮಾಣಪತ್ರಗಳನ್ನು ನೀಡಿರುವುದು ಇದೀಗ ಬಹಿರಂಗವಾಗಿದೆ. ಆಗರ್ ಮಾಳವ ಜಿಲೆಯ ಅಶುತೋಷ್ ಶರ್ಮಾ ಎಂಬುವವರು ಸೆಪ್ಟೆಂಬರ್ 17ರಂದು ರಾತ್ರಿ 8:02 ಗಂಟೆಗೆ ಲಸಿಕೆ ಪಡೆದಿದ್ದರು. ಆದರೆ ಅವರ ತಾಯಿ ವಿದ್ಯಾ ಶರ್ಮಾ ಹೆಸರಿನಲ್ಲಿ ಎಸ್‌ಎಂಎಸ್ ಸಂದೇಶ ಬಂದಿದ್ದು, "ಆತ್ಮೀಯ ವಿದ್ಯಾ ಶರ್ಮಾ, ಕೋವಿಶೀಲ್ಡ್‌ನ 2ನೇ ಡೋಸ್ ಅನ್ನು ಭಾರತ ಲಸಿಕೆ ಡೋಸ್ ನೀಡಿಕೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಸೆಪ್ಟೆಂಬರ್ 17ರಂದು ನೀವು ಯಶಸ್ವಿಯಾಗಿ ಲಸಿಕೆ ಪಡೆದಿದ್ದೀರಿ" ಎಂದು ವಿವರಿಸಲಾಗಿದೆ.

ವಾಸ್ತವವಾಗಿ ವಿದ್ಯಾ ಶರ್ಮಾ, ನಾಲ್ಕು ತಿಂಗಳ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದ್ದರು. ಆಘಾತಕ್ಕೆ ಒಳಗಾದ ಅವರ ಮಗ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

"ತಾಯಿಯ ಮರಣ ಪ್ರಮಾಣಪತ್ರವೂ ನನ್ನ ಬಳಿ ಇದೆ; ಲಸಿಕೆ ಪ್ರಮಾಣಪತ್ರವೂ ಇದೆ. ಬಹುಶಃ ಸಂಖ್ಯೆ ಹೆಚ್ಚಿಸಲು ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ಇದ್ದಿರಬೇಕು ಎನ್ನುವುದು ನನ್ನ ಭಾವನೆ"" ಎಂದು ಅವರು ಹೇಳಿದ್ದಾರೆ.

ಇಂಥದ್ದೇ ಸಂದೇಶ ಇದೇ ಜಿಲ್ಲೆಯ ಪಿಂಕಿ ವರ್ಮಾ ಎಂಬುವವರಿಗೂ ಬಂದಿದೆ. ಇವರಿಗೆ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್‌ಎಂಎಸ್ ಸಂದೇಶ ಬಂದಿತ್ತು. ಆದರೆ  ಇವರು ಮೊದಲ ಡೋಸ್ ಪಡೆದಿದ್ದರು. ರಾಜಸ್ಥಾನದ ಜಲವಾರ್‌ನಲ್ಲಿ ಲಸಿಕೆ ಪಡೆದಿದ್ದಾಗಿ ಸಂದೇಶದಲ್ಲಿ ಹೇಳಲಾಗಿದೆ.
"ಮೊದಲ ಡೋಸ್ ಜೂನ್ 8ರಂದು ಪಡೆದಿದ್ದೆ. ಸೆಪ್ಟೆಂಬರ್ 7ಕ್ಕೆ 2ನೇ ಡೋಸ್ ಪಡೆಯಬೇಕಿತ್ತು. ಆದರೆ ಅಸ್ವಸ್ಥರಾಗಿದ್ದ ಕಾರಣ ಸಾಧ್ಯವಾಗಿರಲಿಲ್ಲ. ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂಬ ಭಾವನೆ ನನ್ನದು" ಎಂದು ವರ್ಮಾ ಹೇಳಿದರು.

ಆದರೆ ಇಂಥ ಲೋಪಗಳ ಒಂದೆರಡು ಪ್ರಕರಣಗಳು ಇರಬಹುದು. ಈ ಬಗ್ಗೆ ತನಿಖೆ ನಡೆಸಿ ದೋಷ ಸರಿಪಡಿಸಲಾಗುತ್ತದೆ ಎಂದು ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News