ವಾಯುಮಾಲಿನ್ಯದಿಂದ ಪ್ರತಿ ವರ್ಷ ಜೀವ ಕಳೆದುಕೊಳ್ಳುವವರೆಷ್ಟು ಗೊತ್ತೇ?

Update: 2021-09-23 04:21 GMT
Image source: PTI File

ಜಿನೀವಾ, ಸೆ.23: ವಿಶ್ವದಲ್ಲಿ ಪ್ರತಿ ವರ್ಷ ವಾಯುಮಾಲಿನ್ಯದಿಂದಾಗಿ 70 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಪ್ರಕಟಿಸಿದೆ.

ಹೃದ್ರೋಗ ಮತ್ತು ಉಸಿರಾಟದ ರೋಗಗಳಿಗೆ ಕಾರಣವಾಗುವ ಪ್ರಮುಖ ಮಾಲಿನ್ಯಕಾರಕ ಕಣಗಳನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಡಬ್ಲ್ಯುಎಚ್‌ಓ 2005ರ ಬಳಿಕ ಮೊದಲ ಬಾರಿಗೆ ವಾಯ ಗುಣಮಟ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ದಹಿಸುವ ಇಂಧನಗಳು ಹೊರಸೂಸುವ ಹೊಗೆಯಿಂದ ಉತ್ಪತ್ತಿಯಾಗುವ ಧೂಳಿನ ಕಣಗಳು ಮತ್ತು ಸಾರಜನಕದ ಡೈ ಆಕ್ಸೈಡ್ ಸೇರಿದಂತೆ ಹಲವು ಮಾಲಿನ್ಯಕಾರಕ ಕಣಗಳ ಶಿಫಾರಸು ಮಾಡಲಾದ ಗರಿಷ್ಠ ಮಟ್ಟವನ್ನು ತಗ್ಗಿಸುವಂತೆ ಎಲ್ಲ 194 ಸದಸ್ಯ ದೇಶಗಳಿಗೆ ಡಬ್ಲ್ಯುಎಚ್‌ಓ ಸಲಹೆ ಮಾಡಿದೆ.

"ಹವಾಮಾನ ಬದಲಾವಣೆಯ ಜತೆಗೆ ವಾಯುಮಾಲಿನ್ಯ ಕೂಡಾ ಮನುಕುಲದ ಆರೋಗ್ಯಕ್ಕೆ ಅತಿದೊಡ್ಡ ಪರಿಸರಾತ್ಮಕ ಅಪಾಯ" ಎಂದು ಅಭಿಪ್ರಾಯಪಟ್ಟಿದೆ. ಈ ಹಿಂದೆ ಭಾವಿಸಲಾದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಮಾಲಿನ್ಯ ಕೂಡಾ ಮಾನವ ಆರೋಗ್ಯಕ್ಕೆ ಹಾನಿ ಮಾಡುತ್ತವೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಇವೆ ಎಂದು ಡಬ್ಲ್ಯುಎಚ್‌ಓ ಸ್ಪಷ್ಟಪಡಿಸಿದೆ.

ವಾಯು ಗುಣಮಟ್ಟದ ಮಾರ್ಗಸೂಚಿಯ ಪ್ರಮಾಣವನ್ನು ಇಳಿಕೆ ಮಾಡಿದ್ದು, ಈ ಗುಣಮಟ್ಟದ ಹಂತವನ್ನು ಮೀರಿದರೆ ಆರೋಗ್ಯಕ್ಕೆ ದೊಡ್ಡ ಅಪಾಯ ಇದೆ ಎಂದು ಎಚ್ಚರಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಳಿಸಿದರೆ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂದು ಸಲಹೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News