"ಪಿಎಂ-ಕೇರ್ಸ್ ಫಂಡ್ ಭಾರತ ಸರ್ಕಾರದ ಫಂಡ್ ಅಲ್ಲ": ದಿಲ್ಲಿ ಹೈಕೋರ್ಟ್‍ಗೆ ತಿಳಿಸಿದ ಕೇಂದ್ರ ಸರಕಾರ

Update: 2021-09-23 07:35 GMT

ಹೊಸದಿಲ್ಲಿ: ಭಾರತದ ಕಾನೂನಿನಡಿ ಚ್ಯಾರಿಟೇಬಲ್ ಟ್ರಸ್ಟ್ ಆಗಿರುವ ಪಿಎಂ-ಕೇರ್ಸ್ ಫಂಡ್ ಭಾರತ ಸರ್ಕಾರದ  ಸಂಸ್ಥೆಯಲ್ಲ ಹಾಗೂ ಈ ಫಂಡ್‍ಗೆ ಹರಿದು ಬರುವ ಹಣ ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾಗೆ ಸೇರುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ದಿಲ್ಲಿ ಹೈಕೋರ್ಟ್‍ಗೆ ತಿಳಿಸಿದ್ದಾರೆ.

"ಒಂದು ಟ್ರಸ್ಟ್ ಭಾರತದ ಸಂವಿಧಾನದ 12ನೇ ವಿಧಿಯನ್ವಯ ಸರ್ಕಾರದ್ದಾಗಿರಲಿ ಅಥವಾ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಹೆಚ್) ಅನ್ವಯ ಸಾರ್ವಜನಿಕ ಸಂಸ್ಥೆಯಾಗಿರಲಿ ಮೂರನೇ ಪಕ್ಷ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಅನುಮತಿಯಿಲ್ಲ" ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಂವಿಧಾನದ 12ನೇ ವಿಧಿಯನ್ವಯ ಈ ಪಿಎಂ-ಕೇರ್ಸ್ ಫಂಡ್ ಅನ್ನು ಸರಕಾರಿ ಫಂಡ್ ಎಂದು ಘೋಷಿಸಬೇಕೆಂದು ಕೋರಿ ಸಂಯಕ್ ಗಂಗ್ವಾಲ್ ಎಂಬವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ಹೇಳಿಕೆಯನ್ನು ನ್ಯಾಯಾಲಯದ ಮುಂದಿಟ್ಟಿದೆ. ಪ್ರಧಾನಿಯಿಂದ ಸ್ಥಾಪಿಸಲ್ಪಟ್ಟ ಹಾಗೂ ಗೃಹ, ರಕ್ಷಣಾ, ವಿತ್ತ ಸಚಿವರು ಟ್ರಸ್ಟೀಗಳಾಗಿರುವ ಈ ಫಂಡ್ ಮೇಲೆ ಸರ್ಕಾರದ ನಿಯಂತ್ರಣವಿಲ್ಲವೆಂದು ತಿಳಿದು ನಾಗರಿಕರು ಕಳವಳಗೊಂಡಿದ್ದಾರೆಂದು ಅರ್ಜಿಯಲ್ಲಿ ದೂರಲಾಗಿತ್ತು.

ತಾವು ಟ್ರಸ್ಟ್ ನಲ್ಲಿ ಗೌರವ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವುದಾಗಿ, ಅದು ಪಾರದರ್ಶಕವಾಗಿ ಕಾರ್ಯಾಚರಿಸುತ್ತಿದೆ ಹಾಗೂ ಲೆಕ್ಕಪತ್ರಗಳನ್ನು ಭಾರತದ ಸಿಎಜಿ  ರಚಿಸಿರುವ ಸಮಿತಿಯ ಲೆಕ್ಕಪರಿಶೋಧಕರೊಬ್ಬರು  ನೋಡಿಕೊಳ್ಳುತ್ತಿದ್ದಾರೆಂದೂ ನ್ಯಾಯಾಲಯಕ್ಕೆ ಅವರು ಹೇಳಿದರು.

"ಪಾರದರ್ಶಕತೆಗಾಗಿ ಆಡಿಟ್ ವರದಿಯನ್ನು ಟ್ರಸ್ಟ್ ನ ಅಧಿಕೃತ ವೆಬ್‍ಸೈಟ್‍ನಲ್ಲಿ ನೀಡಲಾಗಿದ್ದು ಟ್ರಸ್ಟ್ ಹಣ ವ್ಯಯಿಸಲಾದ ಕುರಿತು ಮಾಹಿತಿಯೂ ಅದರಲ್ಲಿದೆ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News