ಅಭ್ಯರ್ಥಿಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ನೀಟ್‌ ವೈದ್ಯಕೀಯ ಪ್ರವೇಶ ಪರೀಕ್ಷೆ ಹಗರಣ ಬೆಳಕಿಗೆ: ವರದಿ

Update: 2021-09-23 08:59 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ :ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಹಗರಣವೊಂದು  ನಡೆದಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಪರೀಕ್ಷೆಗೆ ತಮ್ಮ ಪರವಾಗಿ ಹಾಜರಾಗಲು ನಕಲಿ ಅಭ್ಯರ್ಥಿಗಳನ್ನು ಬಳಸಲು ಹಾಗೂ ಪ್ರವೇಶತಿ ಗಿಟ್ಟಿಸಲು ತಲಾ ಅಭ್ಯರ್ಥಿಗೆ ರೂ 50 ಲಕ್ಷದಂತೆ ಹಣ ಪಡೆಯುವ ಜಾಲವೊಂದನ್ನು ಬೇಧಿಸಲಾಗಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಕನಿಷ್ಠ 15 ನೀಟ್ ಅಭ್ಯರ್ಥಿಗಳ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಮಹಾರಾಷ್ಟ್ರ ಮೂಲದ ಕೋಚಿಂಗ್ ಸೆಂಟರ್ ಆರ್ ಕೆ ಎಜುಕೇಶನ್ ಕ್ಯಾರಿಯರ್ ಗೈಡೆನ್ಸ್, ಅದರ ನಿರ್ದೇಶಕ ಪರಿಮಲ್ ಕೋಟ್‍ಪಲ್ಲಿವರ್ ಮತ್ತು ಹಲವು ವಿದ್ಯಾರ್ಥಿಗಳನ್ನು ಈ ಹಗರಣದಲ್ಲಿ ಹೆಸರಿಸಲಾಗಿದೆಯೆನ್ನಲಾಗಿದ್ದು, ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿಗಾಗಿ ತಲಾ ರೂ. 50 ಲಕ್ಷ  ಹಣ ವಸೂಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರವೇಶಾತಿ ಪಡೆಯಲು ಇಚ್ಛಿಸಿದ ಅಭ್ಯರ್ಥಿಗಳ ಹೆತ್ತವರಿಗೆ ಪೋಸ್ಟ್ ಡೇಟೆಡ್ ಚೆಕ್ಕುಗಳನ್ನು ನಿಗದಿತ ಮೊತ್ತಕ್ಕೆ ನೀಡುವಂತೆ ಹಾಗೂ ವಿದ್ಯಾರ್ಥಿಗಳ ಹತ್ತನೇ ಮತ್ತು 12ನೇ ತರಗತಿ ಪರೀಕ್ಷೆಯ ಮೂಲ ಅಂಕ ಪಟ್ಟಿಗಳನ್ನು ಭದ್ರತೆಗಾಗಿ ಕೋಚಿಂಗ್ ಸೆಂಟರ್‍ಗೆ ನೀಡುವಂತೆ ಸೂಚಿಸಲಾಗಿತ್ತು ಹಾಗೂ ಒಪ್ಪಿದ ರೂ 50 ಲಕ್ಷದಷ್ಟು  ಹಣ ಜಮೆಯಾದ ನಂತರವಷ್ಟೇ ಅಂಕಪಟ್ಟಿಗಳನ್ನು ವಾಪಸ್ ನೀಡುವುದಾಗಿ ಹೇಳಲಾಗಿತ್ತು. 

ಆರೋಪಿ ಪರಿಮಲ್  ತನ್ನ ಬಳಿ ಬಂದ ಅಭ್ಯರ್ಥಿಗಳ ಯೂಸರ್ ಐಡಿ ಮತ್ತು ಪಾಸ್‍ವರ್ಡ್‍ಗಳನ್ನು ಪಡೆದು ಅವರಿಗೆ ಅನುಕೂಲವಾದ ಪರೀಕ್ಷಾ ಕೇಂದ್ರಗಳು ದೊರೆಯುವಂತೆ ಮಾಡಿದ್ದರು. ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತಾಗಲು  ಚಿತ್ರಗಳನ್ನು ತಿರುಚಲಾಗಿತ್ತು  ಆಧಾರ್ ಕಾರ್ಡ್ ಪಡೆದು ಫೋರ್ಜರಿ ಮಾಡಿ ಐಡಿ ಕಾರ್ಡ್‍ಗಳನ್ನು ಸಿದ್ಧಪಡಿಸಲಾಗಿತ್ತು,  ಅಭ್ಯರ್ಥಿಗಳಿಗೆ ಉತ್ತರ ಕೀಗಳು ಮತ್ತು ಓಎಂಆರ್ ಶೀಟುಗಳನ್ನು ತಿರುಚುವ ಭರವಸೆಯನ್ನೂ ಪರಿಮಲ್ ನೀಡಿದ್ದ ಎಂದು ಸಿಬಿಐ ಎಫ್‍ಐಆರ್‍ನಲ್ಲಿ ಹೇಳಲಾಗಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ನೀಟ್‍ಗೆ ಮೂಲ ಅಭ್ಯರ್ಥಿಗಳ ಪರ ಹಾಜರಾಗಲು ಪರಿಮಲ್ ಐದು ಅಭ್ಯರ್ಥಿಗಳನ್ನು ಸಿದ್ಧಪಡಿಸಿದ್ದರೂ ಪರೀಕ್ಷಾ ಕೇಂದ್ರದಲ್ಲಿ ಸಿಬಿಐ ಅಧಿಕಾರಿಗಳು ಹಾಜರಿದ್ದಾರೆಂದು ತಿಳಿದು ಅವರು ಅಲ್ಲಿಗೆ ಬಂದಿರಲಿಲ್ಲ, ಶೋಧ ನಡೆಸಿ ಸಂಬಂಧಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News