ತೆರವು ಕಾರ್ಯಾಚರಣೆ ವೇಳೆ ಪ್ರತಿಭಟನಾಕಾರರನ್ನು ಥಳಿಸಿ ಗುಂಡು ಹಾರಿಸಿದ ಅಸ್ಸಾಂ ಪೊಲೀಸರು

Update: 2021-09-23 16:19 GMT
Photo: thewire

ಹೊಸದಿಲ್ಲಿ, ಸೆ.23: ಅಸ್ಸಾಂ ಸರಕಾರವು ಗುರುವಾರ ದರಾಂಗ್ ಜಿಲ್ಲೆಯಲ್ಲಿ ಪೂರ್ವ ಬಂಗಾಳ ಮೂಲದ ಮುಸ್ಲಿಮರು ಬಹುಸಂಖ್ಯಾತರಾಗಿರುವ ಧೋಲ್ಪುರ ಗ್ರಾಮದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ನಡೆಸಿದ ಸಂದರ್ಭ ಪೊಲೀಸರು ಮತ್ತು ಸ್ಥಳೀಯರ ನಡುವೆ ಸಂಘರ್ಷಗಳು ನಡೆದಿದ್ದು,ದೊಣ್ಣೆಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಒಂಭತ್ತು ಪೊಲೀಸರು ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಪೊಲೀಸರು ಗುಂಡು ಹಾರಿಸಿದ್ದೂ ಕಂಡು ಬಂದಿತ್ತು. 

ಸೋಮವಾರ ನಡೆಸಲಾಗಿದ್ದ ಬೃಹತ್ ತೆರವು ಕಾರ್ಯಾಚರಣೆಯಲ್ಲಿ ಕನಿಷ್ಠ 800 ಕುಟುಂಬಗಳು ನಿರ್ವಸಿತಗೊಂಡಿದ್ದು,ಬೂದಿ ಮುಚ್ಚಿದ ಕೆಂಡದಂತಿದ್ದ ಉದ್ವಿಗ್ನ ಸ್ಥಿತಿ ಗುರುವಾರ ಸ್ಫೋಟಗೊಂಡಿತ್ತು. ಇದು ಈ ಗ್ರಾಮದಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ನಡೆಸಲಾದ ಮೂರನೇ ಸುತ್ತಿನ ತೆರವು ಕಾರ್ಯಾಚರಣೆಯಾಗಿದೆ.
ಲಾಠಿಗಳು ಮತ್ತು ಬಂದೂಕುಗಳೊಂದಿಗೆ ಸಜ್ಜಾಗಿದ್ದ ಪೊಲೀಸರು ದೊಣ್ಣೆಯನ್ನು ಹಿಡಿದುಕೊಂಡು ತಮ್ಮತ್ತ ಧಾವಿಸಿದ್ದ ವ್ಯಕ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದನ್ನು ವೀಡಿಯೊ ತೋರಿಸಿದೆ. ವ್ಯಕ್ತಿ ಚಲನೆಯಿಲ್ಲದೆ ನೆಲದಲ್ಲಿ ಬಿದ್ದುಕೊಂಡಿದ್ದರೂ ಪೊಲೀಸರ ಥಳಿತ ನಿಂತಿರಲಿಲ್ಲ ಎನ್ನಲಾಗಿದೆ.

ಸ್ಥಳೀಯರು ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರು. ಒಂಭತ್ತು ಪೊಲೀಸರು ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಈಗ ಸಹಜವಾಗಿದೆ ಎಂದು ಘರ್ಷಣೆಯ ಸ್ಥಳದಲ್ಲಿದ್ದ ದಾರಂಗ್ ಎಸ್ಪಿ ಸುಷಾಂತ ಬಿಸ್ವ ಶರ್ಮಾ ತಿಳಿಸಿದರು.
ಪರಿಸ್ಥಿತಿ ವಿಷಮಿಸಿದ್ದರಿಂದ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ನಾವು ಮರಳುತ್ತಿದ್ದೇವೆ ಎಂದರು.

ಸ್ಥಳೀಯ ವ್ಯಕ್ತಿಗೆ ಗುಂಡು ಹಾರಿಸಿ ಬಳಿಕ ಥಳಿಸಿದ್ದ ವೀಡಿಯೊ ಪೂಟೇಜ್ ಕುರಿತ ಪ್ರಶ್ನೆಗೆ ಅವರು, ‘ಈ ಪ್ರದೇಶವು ದೊಡ್ಡದಾಗಿದೆ. ನಾನು ಬೇರೆ ಕಡೆಯಲ್ಲಿದ್ದೆ. ಈ ಬಗ್ಗೆ ನಾನು ಪರಿಶೀಲಿಸುತ್ತೇನೆ’ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News