ಬಾರಾಬಂಕಿ ಮಸೀದಿ ಧ್ವಂಸ ಪ್ರಕರಣದ ವರದಿ: ಎಫ್ಐಆರ್ ರದ್ದತಿಗೆ ದಿ ವೈರ್ ಮನವಿ

Update: 2021-09-24 16:45 GMT

ಹೊಸದಿಲ್ಲಿ, ಸೆ.25: ಬಾರಾಬಂಕಿಯ ಗರೀಬ್ ನವಾಝ್ ಅಲ್ ಮರೂಫ್ ಮಸೀದಿಯ ಧ್ವಂಸ ಕಾರ್ಯಾಚರಣೆ ಕುರಿತ ವಿಡಿಯೋ ವರದಿಗೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ರದ್ದುಪಡಿಸಬೇಕೆಂದು ಆಗ್ರಹಿಸಿ ದಿ ವೈರ್ ಸುದ್ದಿಜಾಲತಾಣ ಹಾಗೂ ಅದರ ಇಬ್ಬರು ಪತ್ರಕರ್ತರ ಸಲ್ಲಿಸಿದ ಅರ್ಜಿಯ ಬಗ್ಗೆ ಉತ್ತರಿಸುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ.

ದಿ ವೈರ್ ಹಾಗೂ ಅದರ ಪತ್ರಕರ್ತರ ವಿರುದ್ಧ ಭಾರತೀಯ ದಂಡಸಂಹಿತೆಯ 153 (ಗಲಭೆಯನ್ನು ಸೃಷ್ಟಿಸುವ ಉದ್ದೇಶದಿಂದ ಪ್ರಚೋದನೆಯನ್ನು ನೀಡುವುದು), 153ಎ ( ವಿವಿಧ ಗುಂಪುಗಳ ನಡುವೆ ಶತ್ರುತ್ವಕ್ಕೆ ಉತ್ತೇಜನ), 505(1)(ಬಿ) ( ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ಉದ್ದೇಶ), 120 ಬಿ (ಕ್ರಿಮಿನಲ್ ಸಂಚು) ಹಾಗೂ34 (ಸಮಾನ ದುರುದ್ದೇಶದಿಂದ ಹಲವಾರು ವ್ಯಕ್ತಿಗಳು ಕೃತ್ಯಗಳನ್ನು ಎಸಗುವುದು) ಸೆಕ್ಷನ್ಗಳಡಿ ದಿ ವೈರ್ ಹಾಗೂ ಇತರ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
 
ಈ ಬಗ್ಗೆ ಅಕ್ಟೋಬರ್ 21ರೊಳಗೆ ಉತ್ತರಿಸುವಂತೆಯೂ ನ್ಯಾಯಮೂರ್ತಿಗಳಾದ ರಮೇಶ್ ಸಿಂಗ್ ಹಾಗೂ ಸರೋಜ್ ಯಾದವ್ ಅವರನ್ನೊಳಗೊಂಡ ನ್ಯಾಯಪೀಠವು ಆದೇಶಿಸಿದೆ.
  
ಅಲಿ ಹಾಗೂ ಚೌಹಾಣ್ ಮತ್ತು ದಿ ವೈರ್ ಪತ್ರಿಕೆ ಅಲ್ಲದೆ ಮಸೀದಿ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ಅನೀಸ್, ವಿಡಿಯೋದಲ್ಲಿ ದಿ ವೈರ್ ಪತ್ರಿಕೆಯ ವರದಿಗಾರನ ಜೊತೆ ಮಾತನಾಡಿದ ಸ್ಥಳೀಯ ನಿವಾಸಿಗಳಲ್ಲಿ ಒಬ್ಬನಾದ ಮುಹಮ್ಮದ್ ನಯೀಮ್ ಅವರನ್ನು ಕೂಡಾ ಎಫ್ಐಆರ್ನಲ್ಲಿ ಹೆಸರಿಸಲಾಗಿದೆ. ಪೊಲೀಸ್ ಅಧಿಕಾರಿ ಮಹೇಂದ್ರಸಿಂಗ್ ನೀಡಿದ ದೂರನ್ನು ಆಧರಿಸಿ ಎಫ್ಐಆರ್ ದಾಖಲಾಗಿತ್ತು.

ಮಸೀದಿಯನ್ನು ನೆಲಸಮಗೊಳಿಸುವ ಕಾರ್ಯಾಚರಣೆ ನಡೆಸುವ ಎರಡು ತಿಂಗಳು ಮೊದಲು ಪೊಲೀಸರು ತಮ್ಮ ಕುಟುಂಬ ಸದಸ್ಯರ ಎದುರೇ ತಮ್ಮ ಮೇಲೆ ಯಾವ ರೀತಿ ದೌರ್ಜನ್ಯವೆಸಗಿದ್ದರು ಎಂಬುದನ್ನು ಸ್ಥಳೀಯ ನಿವಾಸಿಗಳು ಹಾಗೂ ಮಸೀದಿ ಸಮಿತಿಯ ಸದಸ್ಯರು ದಿ ವೈರ್ ನ ವಿಡಿಯೋದಲ್ಲಿ ತಿಳಿಸಿದ್ದರು. ಮಸೀದಿಯನ್ನು ಧ್ವಂಸಗೊಳಿಸುವ ಆಡಳಿತದ ನಿರ್ಧಾರವನ್ನು ಪ್ರತಿಭಟಿಸಿ ಮಾರ್ಚ್ 20ರಂದು ಪ್ರತಿಭಟನೆ ನಡೆದ ಸಂದರ್ಭ ಈ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ 180ಕ್ಕೂ ಅಧಿಕ ಮಂದಿಯ ವಿರುದ್ಧ ಕೊಲೆಯತ್ನ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿ ಎಫ್ಐಆರ್ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News