​ಈ ರೈಲು ಮತ್ತೆ ಸಂಚರಿಸಲಿ

Update: 2021-09-24 18:26 GMT

ಮಾನ್ಯರೇ,
ದಾವಣಗೆರೆಯಿಂದ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ವಿಜಯಪುರ-ಮಂಗಳೂರು ಮಾರ್ಗದ ರೈಲು ಸಂಚಾರ ಕೊರೋನದಿಂದಾದ ಮೊದಲ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದು, ಸರಕಾರ ಮಾತ್ರ ಯಾಕೋ ರೈಲು ಸೇವೆ ಪುನರಾರಂಭಿಸಲು ಮನಸ್ಸು ಮಾಡುತ್ತಿಲ್ಲ.
  ಮಧ್ಯ ಕರ್ನಾಟಕದ ಜನತೆ ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಗೆ, ಆ ಭಾಗದ ಅನೇಕ ಉತ್ತಮ ಆಸ್ಪತ್ರೆಗಳಿಗೆ ಮತ್ತು ಉತ್ತರ ಕರ್ನಾಟಕದ ಕಡೆಯೂ ತೆರಳಲು ಬಹುತೇಕ ಇದೇ ರೈಲನ್ನೇ ಹೆಚ್ಚಾಗಿ ಅವಲಂಬಿಸಿದ್ದರು. ಜನರಿಂದ ಉತ್ತಮ ಸ್ಪಂದನೆಯ ಜೊತೆಗೆ ಒಳ್ಳೆಯ ಆದಾಯವನ್ನು ಕೂಡ ತಂದುಕೊಡುತ್ತಿತ್ತು. ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಇದೇ ರೈಲಿನ ಮೂಲಕ ಸಂಚರಿಸುತ್ತಿದ್ದರಿಂದ ಕಡಿಮೆ ಅವಧಿಯಲ್ಲಿಯೇ ಹೆಚ್ಚು ಪ್ರಸಿದ್ಧಿಗೊಂಡಿತ್ತು. ಸರಕಾರ ಇದುವರೆಗಿದ್ದ ಕೋವಿಡ್ ಸಂಬಂಧಿ ನಿರ್ಬಂಧಗಳನ್ನೆಲ್ಲಾ ಬಹುತೇಕ ಎಲ್ಲಾ ವಲಯಗಳಲ್ಲೂ ತೆರವುಗೊಳಿಸಿದೆ, ಜನಜೀವನ ಮತ್ತೆ ಯಥಾಸ್ಥಿತಿಗೆ ಮರಳುತ್ತಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳು ಸೇರಿದಂತೆ ಅಂತರ್ ರಾಜ್ಯಗಳಿಗೂ ರೈಲುಗಳು ಪುನರಾರಂಭವಾಗಿ ಸಂಚರಿಸುತ್ತಿವೆ. ಆದರೆ ಈ ರೈಲು ಮಾತ್ರ ಇನ್ನೂ ಚಾಲನೆಗೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿ. ದಾವಣಗೆರೆಯಿಂದ ಮಂಗಳೂರಿಗೆ ಬಸ್‌ಗೆ ಸುಮಾರು 500 ರೂಪಾಯಿ ದರವಿದ್ದರೆ ಈ ರೈಲಿಗೆ ಕೇವಲ 135 ರೂಪಾಯಿಯಲ್ಲಿ ಸಂಚರಿಸಬಹುದು. ಕರಾವಳಿ ಭಾಗದ ಆಸ್ಪತ್ರೆಗಳಿಗೆ ತೆರಳಲು ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ಸಂಚರಿಸುವುದರಿಂದ ಬಸ್ ದರ ಹೆಚ್ಚೆನಿಸುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ಕೂಡಲೇ ರೈಲಿಗೆ ಪುನರ್ ಚಾಲನೆ ನೀಡಬೇಕಾಗಿದೆ.
 

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News