ಅಸ್ಸಾಂ ತೆರವು ಕಾರ್ಯಾಚರಣೆ: ಆಧಾರ್ ಪಡೆಯಲು ಹೋಗಿದ್ದ ಬಾಲಕ ಹಿಂಸೆಗೆ ಬಲಿ

Update: 2021-09-25 04:03 GMT
Photo credit: Twitter@toramatix

ಗುವಾಹತಿ, ಸೆ.25: ಸ್ಥಳೀಯ ಅಂಚೆ ಕಚೇರಿಯಿಂದ ತನ್ನ ಆಧಾರ್ ಕಾರ್ಡ್ ಪಡೆದುಕೊಂಡು ಮನೆಗೆ ಮರಳುತ್ತಿದ್ದ 12ರ ಬಾಲಕ ಶೇಖ್ ಫರೀದ್‌ಗೆ ತನ್ನ ಮೊದಲ ಗುರುತಿನ ಪತ್ರ ಪಡೆದ ಸಂಭ್ರಮ. ಆದರೆ ವಿಧಿಯಾಟ ಬೇರೆ ಇತ್ತು. ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ!

ಕುಟುಂಬದ ನಾಲ್ವರು ಮಕ್ಕಳ ಪೈಕಿ ಕಿರಿಯವನಾದ ಫರೀದ್, ಸೋಮವಾರ ಸರ್ಕಾರ ಆರಂಭಿಸಿದ ಒತ್ತುವರಿ ತೆರವು ಕಾರ್ಯಾಚರಣೆಯ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿ ವಾಸವಿದ್ದ. ಈ ಕುಟಂಬಕ್ಕೆ ಒಕ್ಕಲೆಬ್ಬಿಸುವ ಬಗ್ಗೆ ಯಾವ ನೋಟಿಸ್ ಕೂಡಾ ನೀಡಿರಲಿಲ್ಲ.

ಸಂಜೆಯ ವೇಳೆಗೆ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಮನೆ ಮುಂದೆ ಬಾಲಕನ ಮೃತದೇಹ ಬಿದ್ದಿತ್ತು. ಆಧಾರ್ ಕಾರ್ಡ್ ಆತನ ಕಿಸೆಯಿಂದ ಇಣುಕುತ್ತಿತ್ತು. "ನನ್ನ ಮಗ ಆಧಾರ್ ಕಾರ್ಡ್ ಪಡೆದ ಬಗ್ಗೆ ರೋಮಾಂಚನಗೊಂಡಿದ್ದ. ಆದರೆ ಆತ ಹೇಗೆ ಮೃತಪಟ್ಟ ಎನ್ನುವ ಕಲ್ಪನೆಯೂ ನಮಗಿಲ್ಲ" ಎಂದು ತಂದೆ ಖಲೇಕ್ ಅಲಿ ರೋದಿಸಿದರು.

ಬ್ರಹ್ಮಪುತ್ರಾ ನದಿ ದಂಡೆಯಲ್ಲಿ ಗುರುವಾರ ಸರ್ಕಾರ ನಡೆಸಿದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಸಿಕ್ಕಿ ಹಾಕಿಕೊಂಡ ಫರೀದ್ ಮನೆಗೆ ಮರಳಿದ್ದು ಶವವಾಗಿ. ಪೊಲೀಸ್ ಗುಂಡಿಗೆ ಬಲಿಯಾದರು ಎನ್ನಲಾದವರ ಪೈಕಿ ಫರೀದ್ ಕೂಡಾ ಒಬ್ಬ. "ಆತನ ಮೃತದೇಹವನ್ನು ಮನೆಗೆ ತಂದಾಗ, ಆತನ ಎದೆಯ ಬಲಭಾಗದಲ್ಲಿ ಗುಂಡಿನ ಗಾಯ ಇತ್ತು" ಎಂದು ಅಲಿ ಹೇಳುತ್ತಾರೆ.

ಘಟನೆಯಲ್ಲಿ 11 ಮಂದಿ ಪೊಲೀಸರು ಸೇರಿದಂತೆ ಇತರ 20 ಮಂದಿ ಗಾಯಗೊಂಡಿದ್ದರು. ಗಾಯಾಳುಗಳಲ್ಲಿ ಹಸ್ನಾ ಬಾನು (15) ಎಂಬ ಬಾಲಕಿಯೂ ಸೇರಿದ್ದಾಳೆ. ಈಕೆಯ ಕುಟುಂಬಕ್ಕೂ ಒತ್ತುವರಿ ತೆರವು ನೋಟಿಸ್ ನೀಡಿರಲಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಕುತೂಹಲದಿಂದ ತೆರಳಿದ್ದ ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಸಂಜೆ ಮನೆಗೆ ತರಲಾಯಿತು. ಆಕೆಯ ಎಡಗೈ ಮುರಿದಿತ್ತು.

"ನಾನು ಏನು ನಡೆಯುತ್ತಿದೆ ಎಂದು ನೋಡಲು ಹೋಗಿದ್ದೆ. ದಿಢೀರನೇ ಕೋಲಾಹಲ ಉಂಟಾಯಿತು. ಜನರು ಓಡಲಾರಂಭಿಸಿದರು. ಯಾರೊ ನನ್ನ ಎಡಗೈ ಮೇಲೆ ಹೊಡದರು. ನಾನು ಪ್ರಜ್ಞೆತಪ್ಪಿ ಬಿದ್ದೆ. ಸ್ಥಳೀಯರನ್ನು ನನ್ನನ್ನು ಎತ್ತಿ ಮನೆಗೆ ಕರೆತಂದರು" ಎಂದು ಘಟನೆಯನ್ನು ವಿವರಿಸಿದಳು. "ಸ್ಥಳೀಯ ಜಿಲ್ಲಾಡಳಿತದ ಭಯದಿಂದ ನಾವು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಬದಲಾಗಿ ಗಾಯವನ್ನು ಬಟ್ಟೆಯಿಂದ ಸುತ್ತಿ ಗಿಡಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧಿ ಹಾಕಿ ಕಟ್ಟಿದ್ದೇವೆ" ಎಂದು ತಂದೆ ಸಯೀದ್ ಅಲಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News