ಸಂಪತ್ತು ಸೃಷ್ಟಿ: ದೇಶದಲ್ಲಿ ಯಾರು ಮುಂದು ಗೊತ್ತೇ?

Update: 2021-09-25 04:52 GMT

ಹೊಸದಿಲ್ಲಿ, ಸೆ.25: ದೇಶದ ಉದ್ಯಮ ಸಮೂಹಗಳು ಮಾರುಕಟ್ಟೆಯಲ್ಲಿ ಭಾರಿ ಲಾಭ ಗಳಿಸಿರುವುದು ಮಾತ್ರವಲ್ಲ; ಹಕ್ಕುದಾರರಿಗೆ ಸಂಪತ್ತನ್ನು ಕೂಡಾ ಸೃಷ್ಟಿಸಿದ್ದಾರೆ. ಕೋವಿಡ್ ಮೊದಲ ಅಲೆಯ ಬಳಿಕ ಷೇರು ಬೆಲೆಗಳು ತ್ವರಿತವಾಗಿ ಪುನಶ್ಚೇತನಗೊಳ್ಳುತ್ತಿದ್ದು, ಹೂಡಿಕೆದಾರರ ಬುಟ್ಟಿಗೆ ಇದರ ಲಾಭ ಸೇರುತ್ತಿದೆ. ಆದಾಯದ ಪ್ರಕಾರ ದೇಶದ ಅತಿದೊಡ್ಡ ಉದ್ಯಮ ಸಮೂಹ ಎನಿಸಿಕೊಂಡಿರುವ ಟಾಟಾ ತನ್ನ ಹಕ್ಕುದಾರರಿಗೆ ಗರಿಷ್ಠ ಸಂಪತ್ತು ಸೃಷ್ಟಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಂಪೆನಿಯ 28 ಲಿಸ್ಟೆಡ್ ಷೇರುಗಳು ಈ ವರ್ಷ ಜನವರಿಯಿಂದೀಚೆಗೆ ಹೂಡಿಕೆದಾರರಿಗೆ ಆರು ಲಕ್ಷ ಕೋಟಿ ರೂಪಾಯಿ ಸಂಪತ್ತು ಸೃಷ್ಟಿಸಿವೆ. ಅಂದರೆ ಶೇಕಡ 40ಕ್ಕಿಂತಲೂ ಅಧಿಕ ಪ್ರತಿಫಲ ಟಾಟಾ ಸಮೂಹದ ಷೇರುಗಳ ಮೇಲಿನ ಹೂಡಿಕೆದಾರರಿಗೆ ಲಭ್ಯವಾಗಿದೆ.

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಸಮೂಹ ನಂತರದ ಸ್ಥಾನದಲ್ಲಿದೆ. ಇದರ ಒಂಭತ್ತು ಲಿಸ್ಟೆಡ್ ಕಂಪೆನಿಗಳು ಹೂಡಿಕೆದಾರರಿಗೆ 4 ಲಕ್ಷ ಕೋಟಿ ರೂ. ಸಂಪತ್ತು ಸೃಷ್ಟಿಸಿವೆ. ಕಂಪೆನಿಯ ಹೂಡಿಕೆದಾರರಿಗೆ ದೊರಕಿದ ಪ್ರತಿಫಲ ಶೇಕಡ 28ರಷ್ಟಾಗಿದೆ. ಸಂಪತ್ತು ಸೃಷ್ಟಿಯಲ್ಲಿ ಬಜಾಜ್ ಮೂರನೇ ಸ್ಥಾನದಲ್ಲಿದ್ದರೆ, ಅದಾನಿ, ಆದಿತ್ಯ ಬಿರ್ಲಾ ಮತ್ತು ಎಲ್ & ಟಿ ನಂತರದ ಸ್ಥಾನಗಳಲ್ಲಿವೆ.

"ಗರಿಷ್ಠ ಸಂಪತ್ತು ಸೃಷ್ಟಿ ಟಾಟಾ ಸಮೂಹದಿಂದ ಆಗಿದೆ. ಇದು ಗರಿಷ್ಠ ಕೊಡುಗೆ ನೀಡಿರುವುದು ಮಾತ್ರವಲ್ಲ; ಇದು ಅತ್ಯಂತ ವೈವಿಧ್ಯಮಯ ಸಮೂಹ ಹಾಗೂ ಗರಿಷ್ಠ ಹಕ್ಕುದಾರರನ್ನು (85 ಲಕ್ಷ) ಹೊಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹೂಡಿಕೆದಾರರಿಗೆ ಗರಿಷ್ಠ ಸಂಪತ್ತನ್ನು ಸೃಷ್ಟಿಸಿಕೊಟ್ಟಿದೆ" ಎಂದು ರಿಪ್ಪಲ್‌ವೇಲ್ ಈಕ್ವಿಟಿ ಅಡ್ವೈಸರ್ಸ್‌ನ ಪಾಲುದಾರ ಮೆಹುಲ್ ಸಾವ್ಲಾ ಹೇಳಿದ್ದಾರೆ.

ಆರ್‌ಐಎಲ್ ಮತ್ತ ಮಹೀಂದ್ರಾ ಸಾಮಾನ್ಯವಾಗಿ ಸೆನ್ಸೆಕ್ಸ್‌ನ ಸಾಧನೆಗೆ ಅನುಗುಣವಾಗಿ ಸಂಪತ್ತು ಸೃಷ್ಟಿಸಿವೆ. ಆದರೆ ಎಚ್‌ಡಿಎಫ್‌ಸಿ ಸಮೂಹ ನಿರೀಕ್ಷಿತ ಸಾಧನೆ ತೋರಿಲ್ಲ. ಹೀರೊ, ಇಂಡಿಯಾ ಬುಲ್ಸ್ ಮತ್ತು ಫ್ಯೂಚರ್ ಸಮೂಹಗಳು ಋಣಾತ್ಮಕ ಪ್ರತಿಫಲ ನೀಡಿವೆ. ಸೆನ್ಸೆಕ್ಸ್ ಕಳೆದ ಜನವರಿಯಿಂದೀಚೆಗೆ ಶೇಕಡ 26ರಷ್ಟು ಪ್ರತಿಫಲ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News