ತೆಲಂಗಾಣದ ದಿನಪತ್ರಿಕೆ ಡೆಲಿವರಿ ಹುಡುಗನ ವೀಡಿಯೋ ಶೇರ್ ಮಾಡಿ ಬಾಲಕನನ್ನು ಹೊಗಳಿದ ಸಚಿವ

Update: 2021-09-25 05:46 GMT
Photo: Twitter/@KTRTRS

ಹೈದರಾಬಾದ್: ದಿನಪತ್ರಿಕೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ತೆಲಂಗಾಣದ ಜಗತಿಯಾಲ್ ಪಟ್ಟಣದ 12 ವರ್ಷದ ಬಾಲಕನ ವೀಡಿಯೋವೊಂದು ರಾಜ್ಯ ಸಚಿವ ಕೆ ಟಿ ರಾಮ ರಾವ್ ಅವರ ಗಮನ ಸೆಳೆದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಬಾಲಕ ಸೈಕಲಿನಲ್ಲಿ ದಿನಪತ್ರಿಕೆಗಳನ್ನು ವಿತರಿಸುವುದು ಕಾಣಿಸುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಏಕೆ ಕೆಲಸ ಮಾಡುತ್ತಿರುವೆ ಎಂದು ದಾರಿಹೋಕರೊಬ್ಬರು ಪ್ರಶ್ನಿಸಿದಾಗ ತಾನು ಕಲಿಕೆ ಹಾಗೂ ಗಳಿಕೆಯನ್ನು ಜತೆಯಾಗಿ ಮಾಡುತ್ತಿರುವುದಾಗಿ ಆತ ತಿಳಿಸುತ್ತಾನೆ.

ಈ ವೀಡಿಯೋ ಶೇರ್ ಮಾಡಿದ ಸಚಿವ ರಾಮ ರಾವ್ "ಜಗತಿಯಲ್ ಪಟ್ಟಣದ ಈ ವೀಡಿಯೋ ಖುಷಿ ನೀಡಿದೆ. ಈ ಬಾಲಕ ಶ್ರೀ ಪ್ರಕಾಶ್ ಸರಕಾರಿ ಶಾಲೆಯ ವಿದ್ಯಾರ್ಥಿ, ಆತನ ವಿಶ್ವಾಸ, ಆಲೋಚನೆಗಳು ಹಾಗೂ ಅಭಿವ್ಯಕ್ತಿ ಖುಷಿ ನೀಡಿತು,'' ಎಂದು ಟ್ವೀಟ್ ಮಾಡಿದ್ದಾರೆ.

ಏಕೆ ದಿನಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡುತ್ತಿರುವೆ ಎಂಬ ಪ್ರಶ್ನೆಗೆ ಬಾಲಕ ತೆಲುಗಿನಲ್ಲಿ ಉತ್ತರಿಸಿ "ನಾನೇಕೆ ಮಾಡಬಾರದು?'' ಎಂದು ಹೇಳುತ್ತಾನೆ. ಶಿಕ್ಷಣದ ಬಗ್ಗೆ ಕೇಳಿದಾಗ "ನನ್ನ ಶಿಕ್ಷಣದ ಜತೆಗೆ ನಾನು ಗಳಿಕೆಯನ್ನೂ ಮಾಡುತ್ತಿದ್ದೇನೆ, ಈಗ ಹೀಗೆ ಮಾಡಿದರೆ ನನ್ನ ಭವಿಷ್ಯಕ್ಕೆ ಸಹಾಯವಾಗುತ್ತದೆ,'' ಎಂದು ಈ ಆರನೇ ತರಗತಿ ಬಾಲಕ ಹೇಳುತ್ತಾನೆ. ಇಲ್ಲಿಯ ತನಕ 2 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದಾರೆ.

ತಾನು ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕೆಲಸ ಮಾಡುತ್ತಿರುವುದಾಗಿ ಹಾಗೂ ತನ್ನ ಸೋದರ ಕೂಡ ಈ ಹಿಂದೆ ಇದೇ ಕೆಲಸ ಮಾಡಿದ್ದಾಗಿ ಬಾಲಕ ಹೇಳಿದ್ದಾನೆ. ಸಣ್ಣವರಿದ್ದಾಗ ದಿನಪತ್ರಿಕೆ ಮಾರಾಟ ಮಾಡುತ್ತಿದ್ದ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರು ತನ್ನ ಪ್ರೇರಣೆ ಎಂದೂ ಆತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News