2015ರ ಸಿವಿಲ್ ಸರ್ವೀಸಸ್ ಟಾಪರ್ ಟೀನಾ ದಾಬಿಯ ಸಹೋದರಿ ರಿಯಾ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ

Update: 2021-09-25 08:11 GMT
Photo: instagram/ria.dabi

ಹೊಸದಿಲ್ಲಿ: 2015ರಲ್ಲಿ ಯುಪಿಎಸ್ ಸಿಯ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ  ಅಗ್ರಸ್ಥಾನಿಯಾಗಿದ್ದ ಟೀನಾ ದಾಬಿ ಅವರ ಸಹೋದರಿ ರಿಯಾ ದಾಬಿ ಶುಕ್ರವಾರ ಘೋಷಿಸಿದ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ಅಖಿಲ ಭಾರತ ಶ್ರೇಣಿಯ 15 ನೇ ಶ್ರೇಣಿಯೊಂದಿಗೆ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ, ಟೀನಾ ದಾಬಿ ತನ್ನ ತಂಗಿಯ ಯಶಸ್ಸಿಗೆ ಸಂತೋಷವಾಗಿದೆ ಎಂದು ಹೇಳಿದರು.

"ನನ್ನ ತಂಗಿ ರಿಯಾ ದಾಬಿ ಯುಪಿಎಸ್‌ಸಿ 2020 ಪರೀಕ್ಷೆಯಲ್ಲಿ 15 ನೇ ಶ್ರೇಯಾಂಕ ಪಡೆದಿದ್ದಾಳೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ" ಎಂದು ಟೀನಾ ಡಾಬಿ ಅವರು ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.

ಇಬ್ಬರೂ ಸಹೋದರಿಯರು ದಿಲ್ಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಟೀನಾ ದಾಬಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದಲಿತ ಸಮುದಾಯದ ಮೊದಲ ಅಭ್ಯರ್ಥಿ ಎನಿಸಿಕೊಂಡಿದ್ದರು.

ಟೀನಾ ದಾಬಿ ಪ್ರಸ್ತುತ ರಾಜಸ್ಥಾನ ಸರಕಾರದಲ್ಲಿ ಹಣಕಾಸು (ತೆರಿಗೆ) ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

ಈ ವರ್ಷ ಒಟ್ಟು 761 ಅಭ್ಯರ್ಥಿಗಳು ( 545 ಪುರುಷರು ಹಾಗೂ 216 ಮಹಿಳೆಯರು) ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿಹಾರದ ಶುಭಂ ಕುಮಾರ್ ಮೊದಲ ಸ್ಥಾನ ಹಾಗೂ ಜಾಗ್ರತಿ ಅವಸ್ಥಿ ಎರಡನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News