ಕೋವಿಡ್ ನಿಯಮ ಉಲ್ಲಂಘನೆ ಆರೋಪ: ರೋಹಿತ್ ಚಕ್ರತೀರ್ಥ ಸಹಿತ ಮೂವರ ವಿರುದ್ಧ ಪುತ್ತೂರು ಠಾಣೆಗೆ ದೂರು

Update: 2021-09-25 09:34 GMT
Photo credit: Facebook

ಪುತ್ತೂರು, ಸೆ.25: ಲೇಖಕ ರೋಹಿತ್ ಚಕ್ರತೀರ್ಥ ಸಹಿತ ಮೂವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿ ದೇವರ ದರ್ಶನ ಪಡೆದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಶನ್(ಎಐವೈಎಫ್) ಬಂಟ್ವಾಳ ತಾಲೂಕು ಸಮಿತಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದೆ.

ಲೇಖಕ, ಬೆಂಗಳೂರು ನಿವಾಸಿ ರೋಹಿತ್ ಚಕ್ರತೀರ್ಥ, ಪತ್ರಕರ್ತರಾದ ಪುತ್ತೂರು ನಿವಾಸಿ ಶ್ಯಾಮ ಸುದರ್ಶನ ಭಟ್ ಹೊಸಮೂಲೆ, ಬೆಂಗಳೂರು ನಿವಾಸಿ ಚಿರಂಜೀವಿ ಭಟ್ ಯಾನೆ ಚಿರು ಭಟ್ ಎಂಬವರು ಸೆ.18ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿರುವುದಾಗಿ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಮೂವರೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳದಿರುವುದು ಹಾಗೂ ಮಾಸ್ಕ್ ಧರಿಸದೇ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆ ಮೂಲಕ ಈ ಮೂವರು ರಾಜ್ಯ ಸರಕಾರ ಹಾಗೂ ದ.ಕ. ಜಿಲ್ಲಾಡಳಿತ ಹೊರಡಿಸಿರುವ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಎಐವೈಎಫ್ ಅಧ್ಯಕ್ಷ ಪ್ರೇಮನಾಥ ಕೆ. ದೂರಿನಲ್ಲಿ ತಿಳಿಸಿದ್ದಾರೆ.

ಈ ಮೂವರು ಅಪರಾಧಿ ಕೃತ್ಯವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡು ಸಂಭ್ರಮಿಸಿರುವುದು ನಿಯಮ ಉಲ್ಲಂಘಿಸಿ ಇತರರಿಗೆ ಅಪಾಯ ಒಡ್ಡಿರುವಂತೆ ವರ್ತಿಸಿದ್ದಲ್ಲದೆ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದ್ದಾರೆ. ಇವರ ದುರ್ವತನೆಯು ಅಕ್ಷಮ್ಯವಾಗಿರುತ್ತದೆ. ಆದ್ದರಿಂದ ಈ ಮೂವರ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆ ವಿಧಿ 4, 5, 9 ಹಾಗೂ ಭಾರತೀಯ ದಂಡ ಸಂಹಿತೆ ವಿಧಿ 269ರ ಅನ್ವಯ ತಕ್ಷಣವೆ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. 

ದೂರು ನೀಡಿದ ಸಂದರ್ಭದಲ್ಲಿ ಎಐವೈಎಫ್ ಬಂಟ್ವಾಳ ತಾಲೂಕು ಉಪಾಧ್ಯಕ್ಷ ಶ್ರೀನಿವಾಸ ಭಂಡಾರಿ, ಎಐಟಿಯುಸಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕರುಣಾಕರ ಮಾರಿಪಳ್ಳ, ಸಿಪಿಐ ಬಂಟ್ವಾಳ ತಾಲೂಕು ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಮತ್ತು ಎನ್ಎಫ್ಐಡಬ್ಲು ದ.ಕ. ಜಿಲ್ಲಾ ಕಾರ್ಯದರ್ಶಿ ಭಾರತಿ ಪ್ರಶಾಂತ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News